ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ನವದೆಹಲಿ: ಭಾರತದಲ್ಲಿ ಹುಟ್ಟಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.
ಮಮತಾ ಬ್ಯಾನರ್ಜಿ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಎಸ್.ಪ್ರಕಾಶ್ ಅವರು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಹಲವು ವರ್ಷಗಳಿಂದಲೂ ಅಧಿಕಾರವನ್ನು ಸಂತೋಷದಿಂದ ಬಳಸಿಕೊಳ್ಳುತ್ತಿದ್ದಾರೆ. ಜನರು ಮಮತಾ ಅವರನ್ನು ಪ್ರೀತಿಯಿಂದ ನೋಡುತ್ತಿದ್ದಾರೆ. ರಾಜಕೀಯದಲ್ಲಿ ಸಂಪೂರ್ಣವಾಗದಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಸುಧೀರ್ಘ ವರ್ಷಗಳಿಂದ ಪ್ರೀತಿ ಹಾಗೂ ಬೆಂಬಲ ವ್ಯಕ್ತಪಡಿಸಿದ್ದ ಜನರಿಗೆ ಇಂದು ಮಮತಾ ಅವಮಾನಿಸಿದ್ದಾರೆಂದು ಹೇಳಿದ್ದಾರೆ.
ಏಪ್ರಿಲ್30 ರಂದು ಮೇದಿನಿಪುರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ಯಾಮಪ್ರಸಾದ್ ಮೊಂಡಲ್ ಅವರು, ಮಮತಾ ಬ್ಯಾನರ್ಜಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೆಣ್ಣು ಅಲ್ಲ, ಗಂಡು ಅಲ್ಲ, ನಪುಂಸಕ(ಹಿಜ್ರಾ) ಎಂದು ಜರಿದಿದ್ದರು. ಹೇಳಿಕೆ ಸಂಬಂಧ ಮೊಂಡಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಭಾರತದಲ್ಲಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಅಸಹಿಷ್ಣುತೆ ಹಾಗೂ ಒಡಕು ರಾಜಕೀಯದ ವಿರುದ್ಧ ಎಲ್ಲಾ ರಾಜ್ಯಗಳು ಮೌನವಹಿಸಬಹುದು. ಆದರೆ, ಪಶ್ಚಿಮ ಬಂಗಾಳ ಮಾತ್ರ ಸುಮ್ಮನೆ ಕೂರುವುದಿಲ್ಲ. ದೆಹಲಿಯಲ್ಲಿ ಎಷ್ಟೇ ಭೀತಿ ಸೃಷ್ಟಿಸಿದರೂ ನಾವು ನಮ್ಮ ದನಿಯನ್ನು ಎತ್ತುತ್ತೇವೆಂದು ಹೇಳಿದ್ದರು.