ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ರಾಜಕೀಯ ಪ್ರವೇಶದ ಕುರಿತು ರಜನಿಕಾಂತ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ಏತನ್ಮಧ್ಯೆ ರಾಜಕೀಯಕ್ಕೆ ಬರುವಂತೆ ಅಥವಾ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಬಿಜೆಪಿ ನೀಡಿದ್ದ ಅಹ್ವಾನಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಹ್ವಾನವನ್ನು ನಿರಾಕರಿಸಿದ್ದಾರೆಯೇ ಅಥವಾ ಅಹ್ವಾನ ಸ್ವೀಕರಿಸಿದ್ದಾರೆಯೇ ಎಂಬ ಕುತೂಹಲ ಹಾಗೆಯೇ ಮುಂದುವರೆದಿದೆ. ರಾಜಕೀಯಕ್ಕೆ ಬರುವಂತೆ ಅಥವಾ ತಮ್ಮ ಪಕ್ಷಕ್ಕೆ ಆಗಮಿಸುವಂತೆ ಬಿಜೆಪಿ ನೀಡುರುವ ಆಹ್ವಾನದ ಬಗ್ಗೆ ಸೂಪರ್‌ಸ್ಟಾರ್ ರಜನೀಕಾಂತ್ ಅವರು ಬುಧವಾರ ಯಾವುದೇ ಸ್ಪಷ್ಟಪ್ರತಿಕ್ರಿಯೆ ನೀಡದೇ ಜಾರಿಕೊಂಡಿದ್ದಾರೆ.
ಈ ಹಿಂದೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಮಂಗಳವಾರ ‘ರಜನೀಕಾಂತ್ ಅವರಿಗೆ ಬಿಜೆಪಿಗೆ ಸ್ವಾಗತವಿದೆ' ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಜನಿಕಾಂತ್ ಅವರು, "ನಾನು ಏನು ಹೇಳಬೇಕಾಗಿತ್ತೋ ಅದನ್ನು ಹೇಳಿದ್ದೇನೆ, ಈಗ ಹೇಳಲು ಏನೂ ಉಳಿದಿಲ್ಲ' ಎಂದು ಹೇಳಿದ್ದಾರೆ. 3 ದಿನದ ಹಿಂದೆ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ದೇವರು ಇಚ್ಛಿಸಿದಲ್ಲಿ, ತಾವು ರಾಜಕೀಯಕ್ಕೆ ಬರಬಹುದು ಎಂದು ರಜನೀಕಾಂತ್ ಹೇಳಿದ್ದರು.
ಹೀಗಾಗಿ ರಜನಿಕಾಂತ್ ರಾಜಕೀಯ ಅಥವಾ ಬಿಜೆಪಿ ಸೇರ್ಪಡೆ ವಿಚಾರ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.