ನವದೆಹಲಿ: ತ್ರಿವಳಿ ತಲಾಕ್ ನೀಡುವವರಿಗೆ ಸಮಾಜದಿಂದ ಬಹಿಷ್ಕಾರ ಹಾಕುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ ಬಿ) ಸೋಮವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ತ್ರಿವಳಿ ತಲಾಕ್ ಗೆ ಸಂಬಂಧಿಸಿದಂತೆ ಮುಸ್ಲಿಂ ಕಾನೂನು ಮಂಡಳಿ ಇಂದು ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಮದುಮಗನಿಗೆ ತ್ರಿವಳಿ ತಲಾಕ್ ನೀಡದಂತೆ ಸೂಚಿಸಿ ಎಂದು ಖ್ವಾಜಿಗಳಿಗೆ ಸಲಹೆ ನೀಡಲಾಗುವುದು. ಅಲ್ಲದೆ ವೆಬ್ ಸೈಟ್, ಪ್ರಕಟಣೆ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ತ್ರಿವಳಿ ತಲಾಕ್ ಹೇಳದಂತೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದೆ.
ಮದುವೆ ಸಂದರ್ಭದಲ್ಲೇ ವರನಿಗೆ ದಾಂಪತ್ಯದಲ್ಲಿ ಬಿರುಕು ಬಿಟ್ಟಾಗ ಮೂರು ಬಾರಿ ತಲಾಕ್ ಹೇಳದಂತೆ ಹಾಗೂ ಇದು ಶರಿಯತ್ ವಿರುದ್ಧವಾಗಿದೆ ಎಂದು ಮುಸ್ಲಿಂ ಕಾನೂನು ಮಂಡಳಿಯ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಅಗತ್ಯಬಿದ್ದರೆ ತ್ರಿವಳಿ ತಲಾಕ್ ನಿಷೇಧಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿತ್ತು.