ಅಪಘಾತ ಸಂಭವಿಸಿರುವ ಸ್ಥಳದಲ್ಲಿ ನೆರೆದಿರುವ ಸ್ಥಳೀಯ ಜನರು
ಉತ್ತರಕಾಶಿ: ಚಾರ್'ಧಾಮ್ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್ ವೊಂದು ಮಧ್ಯಪ್ರದೇಶದ ನಲುಪಾನಿ ಸಮೀಪ ಭಾಗೀರಥಿ ನದಿಗೆ ಉರುಳಿ ಬಿದ್ದಿದ್ದು, ಪರಿಣಾಮ 21 ಯಾತ್ರಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಮಧ್ಯಪ್ರದೇಶದ ಇಂದೋರ್'ನ ಯಾತ್ರಾರ್ಥಿಗಳು ಗಂಗೋತ್ರಿಗೆ ತೆರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಗಂಗೋತ್ರಿಯಿಂದ ಮರಳಿ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದಲ್ಲಿದ್ದ 300 ಮೀಟರ್ ಆಳದ ಕಣಿವೆಗೆ ಬಿದ್ದಿದೆ. ಬಸ್ ನಲ್ಲಿ ಒಟ್ಟು 29 ಮಂದಿ ಯಾತ್ರಾರ್ಥಿಗಳಿದ್ದರು. ಈ ವರೆಗೂ 20 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳ ಪೈಕಿ ಇದೀಗ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.
ಎಸ್'ಡಿಆರ್'ಎಫ್, ಐಟಿಬಿಪಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೇ.12ರಂದು ಚಾರ್ ಧಾಮ್ ಯಾತ್ರೆ ಆರಂಭಿಸಿದ್ದ 29 ಯಾತ್ರಿಗಳು ಯಮುನೋತ್ರಿ, ಗಂಗೋತ್ರಿಗೆ ತೆರಳಿ ಹರಿದ್ವಾರಕ್ಕೆ ವಾಪಸ್ಸಾಗುತ್ತಿದ್ದರು.
ದುರ್ಘಟನೆಗೆ ಮಧ್ಯಪ್ರದೇಶ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ ರೂ.2 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂತಾಪ ಸೂಚಿಸಿದ್ದಾರೆ.