ಹಿಮಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿ
ಕಂಗ್ರಾ: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದಾರೆ.
ಹಿಮಾಚಲಪ್ರದೇಶದ ಚುನಾವಣೆ ನಿಮಿತ್ತ ಇಂದು ಕಂಗ್ರಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಷ್ಟು ದಿನ ಹಿಮಾಚಲ ಪ್ರದೇಶವನ್ನು ಲೂಟಿ ಮಾಡಿದವರಿಗೆ ವಿದಾಯ ಹೇಳುವ ಸಮಯ ಬಂದಿದೆ. ಹಿಮಾಚಲ ಪ್ರದೇಶದಲ್ಲಿ ಐದು ಮಾಫಿಯಾಗಳು ಜನತೆಗೆ ಮಾರಕವಾಗಿದ್ದು, ಗಣಿಗಾರಿಕೆ ಮಾಫಿಯಾ, ಅರಣ್ಯ ಮಾಫಿಯಾ, ಡ್ರಗ್ ಮಾಫಿಯಾ, ಟೆಂಡರ್ ಮಾಫಿಯಾ ಮತ್ತು ವರ್ಗಾವಣೆ ಮಾಫಿಯಾಗಳಿಂದ ಹಿಮಾಚಲ ಪ್ರದೇಶವನ್ನು ಮುಕ್ತಗೊಳಿಸಬೇಕಿದೆ ಎಂದು ಹೇಳಿದರು.
ಇದೇ ವೇಳೆ ಸಿಎಂ ವೀರಭದ್ರಸಿಂಗ್ ನೇತೃತ್ವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಭ್ರಷ್ಟಾಚಾರ ಅಡಗಿದೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡುವುದಿಲ್ಲ. ಹಿಮಾಚಲ ಪ್ರದೇಶದಾದ್ಯಂತ ನಾನು ಪ್ರವಾಸ ಮಾಡಿದ್ದು, ಇಲ್ಲಿ ಪ್ರತಿಯೊಂದು ಪ್ರದೇಶಗಳ ಹಿನ್ನಲೆ ನನಗೆ ಗೊತ್ತಿದೆ.
ದೇವರ ಪುಣ್ಯಭೂಮಿಯಲ್ಲಿ ರಾಕ್ಷಸರು ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಆಡಳಿತ ನಡೆಸುತ್ತಿರುವವರು ತಮ್ಮನ್ನು ದೇವರು ರಕ್ಷಿಸುತ್ತಾನೆ ಎಂದು ಭಾವಿಸಿದ್ದಾರೆ. ಆದರೆ ದೇವರು ಎಂದಿಗೂ ಕೆಟ್ಟವರ ಕೈ ಹಿಡಿಯುವುದಿಲ್ಲ. ಇಲ್ಲಿನ ರಾಕ್ಷಸರನ್ನು ಓಡಿಸಿ ಈ ಭೂಮಿಯನ್ನು ನಿಜಕ್ಕೂ ದೇವ ಭೂಮಿಯನ್ನಾಗಿಸಬೇಕು. ಅದು ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೊಗೆದರೆ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷ ನಗೆಪಾಟಲಿನ ಕ್ಲಬ್ ಆಗಿದ್ದು, ಅದರ ಸಿಎಂ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇದಕ್ಕೆ ಮುಂಬರುವ ನವೆಂಬರ್ 9ರಂದು ಉತ್ತರ ದೊರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಉತ್ತರ ಪ್ರದೇಶ ಎನ್ ಟಿಪಿಸಿ ವಿದ್ಯುತ್ ಸ್ಥಾವರದ ದುರ್ಘಟನೆ ಸಂಬಂಧ ಸಂತ್ರಸ್ಥರಿದೆ ಪ್ರಧಾನಿ ಮೋದಿ ಪರಿಹಾರ ಧನ ನೀಡುವ ಕುರಿತು ನಿರ್ಧರಿಸಿದರು. ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಂಭೀರ ಗಾಯಾಳುಗಳಿಗೆ 50 ಸಾವಿರ ರು. ನೀಡುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿದರು.