ಪ್ರಧಾನಿ ಮೋದಿಗೆ ಡಿಎಂಕೆ ಸದಸ್ಯರಿಂದ ಗೌರವಾರ್ಪಣೆ
ಚೆನ್ನೈ: ಚೆನ್ನೈನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತಮಿಳುನಾಡು ಮಾಜಿ ಸಿಎಂ ಎಂ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದರು.
ಇಂದು ವರ್ನಾಕ್ಯುಲರ್ ದೈನಿಕದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದು, ಮದ್ರಾಸ್ ವಿವಿಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ನೇರವಾಗಿ ಚೆನ್ನೈನ ಗೋಪಾಲಪುರಂನಲ್ಲಿರುವ ಎಂ ಕರುಣಾನಿಧಿ ಅವರ ನಿವಾಸಕ್ಕೆ ಆಗಮಿಸಿದುರು. ಪ್ರಧಾನಿ ಮೋದಿ ಅವರನ್ನು ಕರುಣಾನಿಧಿ ಅವರ ಪುತ್ರರಾದ ಸ್ಟಾಲಿನ್ ಹಾಗೂ ಅಳಗಿರಿ ಜಂಟಿಯಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಕಾರಿನಿಂದ ಉಳಿದ ಕೂಡಲೇ ಕರುಣಾನಿಧಿ ಪುತ್ರ ಸ್ಟಾಲಿನ್ ಅವರು ಪ್ರಧಾನಿ ಮೋದಿಗೆ ಕೆಂಪು ಶಾಲು ಹೊದಿಸುವ ಮೂಲಕ ಆತ್ಮೀಯ ಸ್ವಾಗತ ಕೋರಿದರು. ಬಳಿಕ ಮೋದಿ ಸ್ಟಾಲಿನ್ ಹಾಗೂ ಅಳಗಿರಿಗೆ ಹಸ್ತಲಾಘವ ನೀಡಿ ನೇರವಾಗಿ ಕರುಣಾನಿಧಿ ನಿವಾಸದೊಳಗೆ ತೆರಳಿದರು. ಪ್ರಧಾನಿ ಮೋದಿ ಬರುವಿಕೆಗಾಗಿ ಗಾಲಿ ಕುರ್ಚಿಯಲ್ಲಿ ಕಾಯುತ್ತಿದ್ದ ಕರುಣಾನಿಧಿ ಅವರು ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಹರ್ಷದಿಂದ ಹಸ್ತಲಾಘವ ನೀಡಿದರು. ಈ ವೇಳೆ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ ಬಳಿಕ ಕರುಣಾನಿಧಿ ಅವರ ಪತ್ನಿ ಮತ್ತು ಅವರ ಇತರೆ ಕುಟುಂಬಸ್ಥರೊಡನೆ ಕೆಲಕಾಲ ಚರ್ಚೆ ನಡೆಸಿದರು. ಕರುಣಾನಿಧಿ ಮತ್ತು ಪ್ರಧಾನಿ ಮೋದಿ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಪ್ರಧಾನಿ ಮೋದಿ ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದ ವೇಳೆ ಕರುಣಾನಿಧಿ ಪುತ್ರರಾದ ಅಳಗಿರಿ, ಸ್ಟಾಲಿನ್ ಸೇರಿದಂತೆ ಪುತ್ರಿ ಕನ್ನಿಮೋಳಿ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಕೇಂದ್ರ ಸಚಿವ ಪೋಣ್ ರಾಧಾಕೃಷ್ಣನ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ತಮಿಳಿಸೈ ಸೌಂದರ್ ರಾಜನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಾಳೆ ಸುಪ್ರೀಂ ಕೋರ್ಟ್ ನಲ್ಲಿ 2ಜಿ ಹಗರಣದ ವಿಚಾರಣೆ ಇದ್ದು, ಇದೂ ಕೂಡ ಪ್ರಧಾನಿ ಮೋದಿ-ಎಂ ಕರುಣಾನಿಧಿ ಭೇಟಿ ಕುರಿತು ಕುತೂಹಲ ಹೆಚ್ಚಿಸಿದೆ. 2ಜಿ ಹಗರಣದಲ್ಲಿ ಕರುಣಾನಿಧಿ ಅವರ ಪುತ್ರಿ ಕನ್ನಿಮೋಳಿ, ಸಂಬಂಧಿ ಎ ರಾಜಾ ಸೇರಿದಂತೆ ಕರುಣಾನಿಧಿ ಅವರ ಬಹುತೇಕ ಕುಟುಂಬ ಸದಸ್ಯರು ಭಾಗಿಯಾಗಿದ್ದು, ಈ ಬಗ್ಗೆ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದೆ.