ರಾಜಸ್ತಾನ ರಾಜ್ಯ ಮುಖ್ಯಮಂತ್ರಿ ವಸುಂದರಾ ರಾಜೆ
ಜೈಪುರ: ಬಾಲಿವುಡ್'ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದಲ್ಲಿ ಮಾಡಬಹುದಾದ ಅಗತ್ಯ ಬದಲಾವಣೆಗಳನ್ನು ಪರಿಶೀಲಿಸುವ ಸಲುವಾಗಿ ತಜ್ಞರ ಸಮತಿಯೊಂದರನ್ನು ರಚಿಸುವಂತೆ ರಾಜಸ್ತಾನ ರಾಜ್ಯ ಮುಖ್ಯಮಂತ್ರಿ ವಸುಂದರಾ ರಾಜೆಯವರು ಕೇಂದ್ರ ಸರ್ಕಾರಕ್ಕೆ ಶನಿವಾರ ಪತ್ರವೊಂದನ್ನು ಬರೆದಿದ್ದಾರೆ.
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವೆ ಸ್ಮೃತಿ ಇರಾನಿಯವರಿಗೆ ಪತ್ರ ಬರೆದಿರುವ ಅವರು, ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಎಲ್ಲಾ ಸಂಭಾವ್ಯ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಳ್ಳುವ ಅಗತ್ಯವಿದ್ದು, ಚಿತ್ರದಲ್ಲಿ ಮಾಡಬಹುದಾದ ಅಗತ್ಯ ಬದಲಾವಣೆಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಅಲ್ಲದೆ, ಚಿತ್ರವನ್ನು ವೀಕ್ಷಿಸಲು ಮತ್ತು ದರದಲ್ಲಿ ಯಾವುದೇ ಸಮುದಾಯದ ಭಾವನೆಗೆ ಧಕ್ಕೆ ಮಾಡುವಂಥಹ ವಿಷಯಗಳಿದ್ದರೆ ಅದನ್ನು ತೆಗೆದು ಹಾಕುವ ಸಲುವಾಗಿ ಇತಿಹಾಸ ತಜ್ಞರು, ಚಿತ್ರ ಪಂಡಿತರು ಮತ್ತು ರಜಪೂತ ಸಮುದಾಯದ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪದ್ಮಾವತಿ ಚಿತ್ರ ತಂಡ ಸೆನ್ಸಾರ್ ಮಂಡಳಿಗೆ ಕಳುಹಿಸಿದ ಅರ್ಜಿಯು ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಮಂಡಳಿಯು ಅದನ್ನು ವಾಪಸ್ ಕಳುಹಿಸಿದ ಬೆನ್ನಲ್ಲೇ ರಾಜೆಯವರು ಈ ರೀತಿಯ ಹೇಳಿಕೆಯನ್ು ನೀಡಿದ್ದಾರೆ.