ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಈಗ ರೇಪ್ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಕಳೆದ ವರ್ಷ ದೇಶದ 19 ಪ್ರಮುಖ ನಗರಗಳ ಪೈಕಿ ದೆಹಲಿಯಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿ(ಎನ್ ಸಿ ಆರ್ ಬಿ) ಗುರುವಾರ ತಿಳಿಸಿದೆ.
ಎನ್ ಸಿಆರ್ ಬಿ ದಾಖಲೆಗಳ ಪ್ರಕಾರ, 2016ರಲ್ಲಿ ದೆಹಲಿಯಲ್ಲಿ ಶೇ.40ರಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿರುವ ಮುಂಬೈನಲ್ಲಿ ಶೇ.29ರಷ್ಟು ಅತ್ಯಾಚಾರ ಪ್ರಕರಗಳು ದಾಖಲಾಗಿವೆ. ಅಪ್ರಾಪ್ತ ವಯಸ್ಸಿನವರು ಕೂಡ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಬಗ್ಗೆ ದಾಖಲೆಗಳಿಂದ ಬಹಿರಂಗವಾಗಿದೆ.
ಕಳೆದ ವರ್ಷ ದೆಹಲಿಯಲ್ಲಿ ಶೇ.33ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿರುವ ಮುಂಬೈನಲ್ಲಿ ಶೇ.12.3ರಷ್ಟು ಪ್ರಕರಣಗಳು ದಾಖಲಾಗಿವೆ.
ಒಟ್ಟು ಐಪಿಸಿ ಅಪರಾಧ ಪ್ರಕರಣಗಳ ಪೈಕಿ ದೆಹಲಿಯಲ್ಲಿ ಶೇ 38.8ರಷ್ಟು ದಾಖಲಾಗಿದ್ದು, ಎರಡನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಶೇ 8.9 ಹಾಗೂ ಮುಂಬೈನಲ್ಲಿ ಶೇ 7.7ರಷ್ಟು ಪ್ರಕರಣಗಳು ದಾಖಲಾಗಿವೆ.
ಅಪರಾಧಗಳಲ್ಲಿ ಮಹಿಳೆಯರನ್ನು, ಯುವತಿಯರನ್ನು ಮತ್ತು ಬಾಲಕಿಯರನ್ನು ಅತ್ಯಾಚಾರ ಮಾಡುವುದು, ಅತ್ಯಾಚಾರಕ್ಕೆ ಯತ್ನಿಸುವುದು, ಅಪಹರಿಸುವುದು, ವರದಕ್ಷಿಣೆ ಕಿರುಕುಳ, ಮಹಿಳೆ ಮೇಲೆ ಹಲ್ಲೆ, ಅವಮಾನ ಮಾಡುವುದು, ಮಹಿಳೆಯ ವಿನಮ್ರತೆಯನ್ನು ದುರುಪಯೋಗಪಡಿಸುವುದು, ಗಂಡನಿಂದ ಮತ್ತು ಸಂಬಂಧಿಕರಿಂದ ಕಿರುಕುಳ, ವಿದೇಶಗಳಿಂದ ಹುಡುಗಿಯರನ್ನು ಆಮದು ಮಾಡಿಕೊಳ್ಳುವುದು,ಆತ್ಮಹತ್ಯೆ ಕುಮ್ಮಕ್ಕು ನೀಡುವುದು, ಮಹಿಳೆಯನ್ನು ಕೆಟ್ಟದ್ದಾಗಿ ಬಿಂಬಿಸುವುದು, ಗೃಹ ಹಿಂಸೆ ಇತ್ಯಾದಿಗಳು ಸೇರಿಕೊಂಡಿವೆ.