ನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣ ಸಂಬಂಧ ಮೌನವಹಿಸುವ ಹಕ್ಕು ಶಶಿತರೂರ್ ಗೆ ಇದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಈ ಸಂಬಂಧ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮತ್ತು ಅವರ ನೇತೃತ್ವದ ರಿಪಬ್ಲಿಕ್ ಟಿವಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್, ಅರ್ನಾಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಟಿವಿಗೆ ನೋಟಿಸ್ ನೀಡಿದೆ. ನೋಟಿಸ್ ನಲ್ಲಿ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುದ್ದಿ ಬಿತ್ತರಿಸುವ ಮೊದಲು ಶಶಿ ತರೂರ್ ಅವರ ಹೇಳಿಕೆ ಮತ್ತು ಅಭಿಪ್ರಾಯ ಪಡೆಯುವಂತೆ ಸೂಚಿಸಿದೆ ಎನ್ನಲಾಗಿದೆ.
ಈ ವೇಳೆ ನೇರವಾಗಿ ಅರ್ನಾಬ್ ಗೋಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಸುನಂದಾ ಪುಷ್ಕರ್ ಸಾವು ಪ್ರಕರಣ ಸಂಬಂಧ ಶಶಿತರೂರ್ ಅವರು ಮೌನವಾಗಿದ್ದಾರೆ ಎಂದ ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ. ಪ್ರಕರಣ ಸಂಬಂಧ ಮೌನ ವಹಿಸುವ ಹಕ್ಕು ಅವರಿಗಿದೆ ಎಂದು ಹೈಕೋರ್ಟ್ ಹೇಳಿದೆ.
ಇನ್ನು ಈ ಹಿಂದೆ ಸುನಂದಾ ಪುಷ್ಕರ್ ಸಾವು ಪ್ರಕರಣಕ್ಕೆ ಸಂಬಧಿಸಿದಂತೆ ತನಿಖಾ ಪ್ರಕ್ರಿಯೆ ಸಂಬಂಧ ವರದಿ ಮಾಡಿದ್ದ ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಟಿವಿ ವಾಹಿನಿ, ಸತತ 8 ಗಂಟೆಗಳ ಕಾಲ ಸುದ್ದಿ ಮತ್ತು ಚರ್ಚೆ ಬಿತ್ತರಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಶಶಿತರೂರ್ ಅವರು ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಟಿವಿ ವಿರುದ್ಧ 2 ಕೋಟಿ ರು. ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.
2014 ಜನವರಿ 17ರಂದು ದೆಹಲಿ ಖಾಸಗಿ ಪಂಚತಾರ ಹೊಟೆಲ್ ನಲ್ಲಿ ಸುನಂದಾ ಪುಷ್ಕರ್ ಅವರ ಮೃತ ದೇಹ ಪತ್ತೆಯಾಗಿತ್ತು. ಬಳಿಕ ಸುನಂದಾ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಸುನಂದಾ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.