ದೇಶ

ಬಿಎಸ್ಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ: ಓರ್ವ ಯೋಧ ಹುತಾತ್ಮ, ಇಬ್ಬರು ಉಗ್ರರನ್ನು ಸದೆಬಡಿದ ಸೇನೆ

Manjula VN

ಶ್ರೀನಗರ: ಶ್ರೀನಗರ ವಿಮಾನ ನಿಲ್ದಾಣದ ಸಮೀಪವಿರುವ ಬಿಎಸ್ಎಫ್ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಗಾಯಗೊಂಡಿದ್ದ 3 ಯೋಧರ ಪೈಕಿ ಓರ್ವ ಯೋಧ ಹುತಾತ್ಮರಾಗಿದ್ದಾರೆಂದು ಮಂಗಳವಾರ ತಿಳಿದುಬಂದಿದೆ...

ಬಿಎಸ್ಎಫ್ 182 ಬೆಟಾಲಿಯನ್ ಪಡೆಯನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರು ದಾಳಿ ನಡೆಸುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ಸೇನಾಪಡೆಗಳು ಇದೀಗ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ. 
ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿದ್ದು, ಪ್ರಸ್ತುತ ಸ್ಥಳದಲ್ಲಿ ಯೋಧರು ಹಾಗೂ ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ. ಗಾಯಗೊಂಡಿರುವ ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವಿಮಾನ ನಿಲ್ದಾಣ ಮುಖ್ಯ ದ್ವಾರದ ಬಳಿಯಿರುವ ಬಿಎಸ್ಎಫ್ 182 ಬೆಟಾಲಿಯನ್ ಪಡೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಬೆಳಿಗ್ಗೆ 4 ಗಂಟೆ ಸುಮಾರಿಗೆ ಉಗ್ರರು ಆತ್ಮಹುತಿ ದಾಳಿ ನಡೆಸಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಉಗ್ರರ ವಿರುದ್ಧದ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಉದ್ಯೋಗಿಗಳು, ಪ್ರಯಾಣಿಕರು, ವಾಹನಗಳಿಗೆ ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡುತ್ತಿಲ್ಲ. ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. 

ಉಗ್ರರು ದಾಳಿ ನಡೆಸಿರುವ ವಿಮಾನ ನಿಲ್ದಾಣದ ಹತ್ತಿರದಲ್ಲಿಯೇ ಶಾಲೆ ಕೂಡ ಇದ್ದು, ಉಗ್ರರ ದಾಳಿ ಹಿನ್ನಲೆಯಲ್ಲಿ ಶಾಲೆಯನ್ನು ಮುಚ್ಚಿಸಲಾಗಿದೆ. ಪ್ರಸ್ತುತ ಉಗ್ರರು ದಾಳಿ ನಡೆಸಿರುವ ವಿಮಾನ ನಿಲ್ದಾಣ ಶ್ರೀನಗರದ ಸುತ್ತಮುತ್ತಲಿನ ಪ್ರಮುಖ ನಾಗರೀಕ ವಿಮಾನ ನಿಲ್ದಾಣವಾಗಿದ್ದು, ಸೇನಾ ಪಡೆ ಹಾಗೂ ವಿಐಪಿಗಳು ಈ ವಿಮಾನ ನಿಲ್ದಾಣಗಳನ್ನು ಬಳಕೆ ಮಾಡುತ್ತಿದ್ದರು. ನಿಲ್ದಾಣದ ಹತ್ತಿರದಲ್ಲಿಯೇ ಬಿಎಸ್ಎಫ್ ಹಾಗೂ ಸಿಆರ್'ಪಿಎಫ್ ಪಡೆಗಳ ಹಲವು ತರಬೇತಿ ಕೇಂದ್ರಗಳಿವೆ ಎಂದು ವರದಿಗಳು ತಿಳಿಸಿವೆ. 
SCROLL FOR NEXT