ದೇಶ

ಯೋಗಿ ವಿರುದ್ಧವೂ ಕೇಸ್ ದಾಖಲಿಸಲು ತನಿಖಾಧಿಕಾರಿಗಳು ಯತ್ನಿಸಿದ್ದರು: ಮಾಲೆಗಾಂವ ಸ್ಫೋಟ ಪ್ರಕರಣದ ಆರೋಪಿ

Lingaraj Badiger
ಮುಂಬೈ: 2008ರ ಮಾಲೆಗಾಂವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಬಿಜೆಪಿ ಸಂಸದರಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧವೂ ಪ್ರಕರಣ ದಾಖಲಿಸಲು ತನಿಖಾ ಅಧಿಕಾರಿಗಳು ಯತ್ನಿಸಿದ್ದರು ಎಂದು ಸ್ಫೋಟ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಸುಧಾಕರ್ ಚತುರ್ವೇದಿ ಅವರು ಬುಧವಾರ ಹೇಳಿದ್ದಾರೆ.
ಮಾಲೆಗಾಂವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ಸೇರಿದಂತೆ ಕೆಲವು ಹಿಂದೂ ಪರ ಸಂಘಟನೆಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ತನಿಖಾ ಅಧಿಕಾರಿಗಳು ಯತ್ನಿಸಿದ್ದರು ಎಂದು ಸದ್ಯ ಜಾಮೀನಿನ ಮೇಲೆ ಹೊರಗಿರುವ ಚತುರ್ವೇದಿ ಅವರು ಆರೋಪಿಸಿದ್ದಾರೆ.
ಅಂದಿನ ಕಾಂಗ್ರೆಸ್-ಎನ್ ಸಿಪಿ ಸರ್ಕಾರ ಕೇಸರಿ ಭಯೋತ್ಪಾದನೆಯನ್ನು ಸಾಬೀತುಪಡಿಸುವುದಕ್ಕಾಗಿ ಮತ್ತು ಅಲ್ಪ ಸಂಖ್ಯಾತರ ಒಲೈಕೆಗಾಗಿ ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು ಎಂದು ಚತುರ್ವೇದಿ ದೂರಿದ್ದಾರೆ.
ವಿಚಾರಣೆ ವೇಳೆ ನನಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಗ್ಗೆ ಮತ್ತು ಯೋಗಿ ಆದಿತ್ಯನಾಥ್ ಬಗ್ಗೆ ಕೆಲ ನಿರ್ಧಿಷ್ಟ ಪ್ರಶ್ನೆಗಳನ್ನು ಕೇಳಿದ್ದರು. ನನ್ನ ಮೂಲಕ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಪ್ರಕರಣ ದಾಖಲಿಸಲು ಯತ್ನಿಸಿದ್ದರು ಎಂದು ಚೆತುರ್ವೇದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮಾಲೆಗಾಂವ ಸ್ಫೋಟ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವ ಮುನ್ನ ಮಹಾರಾಷ್ಟ್ರದ ಎಟಿಎಸ್ ತನಿಖೆ ನಡೆಸುತ್ತಿತ್ತು.
ಸೆಪ್ಟೆಂಬರ್ 29, 2008ರಲ್ಲಿ ಮಾಲೆಗಾಂವನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು. ಅಲ್ಲದೆ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
SCROLL FOR NEXT