ಶಶಿಕಲಾ ಪತಿ ನಟರಾಜನ್ (ಸಂಗ್ರಹ ಚಿತ್ರ)
ಚೆನ್ನೈ: ಅಕ್ರಮ ಆಸ್ಥಿ ಗಳಿಕೆ ಪ್ರಕರಣ ಸಂಬಂಧ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ಪತಿ ನಟರಾಜನ್ ಅವರಿಗೆ ನಡೆಸಲಾದ ಅಂಗ ಕಸಿ ಶಸ್ತ್ರಚಿಕಿತ್ಸೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಪ್ರಸ್ತುತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಶಿಕಲಾ ಪತಿ ನಟರಾಜನ್ ಸುರಕ್ಷಿತವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ನಟರಾಜನ್ ಅವರಿಗೆ ಕಿಡ್ನಿ ಮತ್ತು ಲಿವರ್ ಅಂಗಗಳನ್ನು ಅಂಗಕಸಿ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ನಟರಾಜನ್ ಅವರಿಗೆ ಅಂಗಗಳನ್ನು ದಾನ ಮಾಡಿದ ತಂಜಾವೂರು ಮೂಲದ 19 ವರ್ಷದ ಯುವಕ ಎನ್ ಕಾರ್ತಿಕ್ ಮಾತ್ರ ಸಾವನ್ನಪ್ಪಿದ್ದಾನೆ.
ಮೂಲಗಳ ಪ್ರಕಾರ ಕಳೆದ ಶನಿವಾರ ಕೀರಮಂಗಲಂ ಬಳಿಯ ಅರಂತಂಗಿ-ಪದುಕೋಟೈ ರಸ್ತೆಯಲ್ಲಿ ಅಫಘಾತಕ್ಕೀಡಾಗಿದ್ದ. ಈ ವೇಳೆ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾರ್ತಿಕ್ ಮತ್ತು ನಟರಾಜನ್ ಅವರ ರಕ್ತದ ಗುಂಪು ಒಂದೇ ಆಗಿದ್ದು, ಅಂಗಕಸಿ ಶಸ್ತ್ರ ಚಿಕಿತ್ಸೆ ನಡೆಸಬಹುದು ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಮಂಗಳವಾರ ಕಾರ್ತಿಕ್ ನನ್ನು ಹೆಲಿಕಾಪ್ಟರ್ ಮೂಲಕ ಚೆನ್ನೈ ನ ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಈತನನ್ನು ಪರೀಕ್ಷಿಸಿದ್ದ ವೈದ್ಯರು ಈತನ ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಿ ಆತನ ಪೋಷಕರ ಅನುಮತಿ ಪಡೆದು ಆತನ ಕಿಡ್ನಿ ಮತ್ತು ಲಿವರ್ ಅಂಗಗಳನ್ನು ನಟರಾಜನ್ ಅವರಿಗೆ ಅಳವಡಿಸಿದ್ದಾರೆ.
ವೈದ್ಯರ ಈ ನಡೆ ಇದೀಗ ವಿವಾದಕ್ಕೀಡಾಗಿದ್ದು, ನಟರಾಜನ್ ಅವರಿಗಾಗಿಯೇ ಗಾಯಾಳು ಕಾರ್ತಿಕ್ ನನ್ನು ಚೆನ್ನೈ ಗೆ ಕರೆಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಅಪಘಾತಕ್ಕೀಡಾಗಿದ್ದ ಕಾರ್ತಿಕ್ ಮೂಲತಃ ಕಡುಬಡ ಕುಟುಂಬದಿಂದ ಬಂದವನಾಗಿದ್ದು, ಆತನ ಹೆಚ್ಚಿನ ಚಿಕಿತ್ಸೆಗಾಗಿ ಅದೂ ಕೂಡ ಹೆಲಿಕಾಪ್ಟರ್ ನಲ್ಲಿ ಚೆನ್ನೈ ಆಸ್ಪತ್ರೆಗೆ ಕರೆತಂದವರಾರು? ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 10ಕ್ಕೂ ಮೊದಲೇ ಅಂಗಕಸಿಗಾಗಿ ದಾಖಲಾಗಿದ್ದ ರೋಗಿಗಳಿರುವಾಗ ನಟರಾಜನ್ ಗೇ ಏಕೆ ವೈದ್ಯರು ಪ್ರಥಮ ಪ್ರಾಶಸ್ತ್ಯ ನೀಡಿ ಶಸ್ತ್ರಚಿಕಿತ್ಸೆ ನಡೆಸಿದರು? ನಟರಾಜನ್ ಗಾಗಿ ಆಸ್ಪತ್ರೆ ನಿಯಮಗಳನ್ನು ವೈದ್ಯರು ಗಾಳಿಗೆ ತೂರಿದರೇ? ನಟರಾಜನ್ ಗಾಗಿಯೇ ಕಾರ್ತಿಕ್ ಗೆ ಅಪಘಾತವಾಯಿತೇ ಎಂಬಿತ್ಯಾದಿ ಗಂಭೀರ ಪ್ರಶ್ನೆಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ.
ಇನ್ನು ಈ ಸಂಬಂಧ ಗ್ಲೆನಿಗಲ್ಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರು ಪ್ರತಿಕ್ರಿಯೆ ನೀಡಿದ್ದು, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ನಿಯಮದಂತೆಯೇ ನಟರಾಜನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಂಗಾಂಗ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟರಾಜನ್ ಹೆಸರು ಮುಂಚೂಣಿಯಲ್ಲಿತ್ತು. ಹೀಗಾಗಿ ಯುವಕನ ಕುಟುಂಬದವರ ಒಪ್ಪಿಗೆಯೊಂದಿಗೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೆ, ಯುವಕನ ಒಂದು ಮೂತ್ರಪಿಂಡವನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ. ಉಳಿದ ಅಂಗಾಂಗಳನ್ನು ನಿಯಮದಂತೇ ಗ್ಲೋಬಲ್ ಆಸ್ಪತ್ರೆಗೆ ಬಳಸಲು ಅವಕಾಶವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics