ನವದೆಹಲಿ: 2008ರಲ್ಲಿ ನಡೆದ ಜೆಡಿಯು ಶಾಸಕ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಚಿವ ಗೋಪಾಲಕೃಷ್ಣ ಪಟಾರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಬಂಧಿಸಿದೆ.
ತಮ್ಮ ರಾಜಕೀಯ ವಿರೋಧಿಯನ್ನು ಹತ್ಯೆ ಮಾಡಲು ನಕ್ಸಲರೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಪಟಾರ್ ಅಲಿಯಾಸ್ ರಾಜ ಪೆಟೆರ್ ನನ್ನು ಇಂದು ರಾಂಚಿಯಲ್ಲಿ ಬಂಧಿಸಿರುವುದಾಗಿ ಎನ್ಐಎ ವಕ್ತಾರರು ತಿಳಿಸಿದ್ದಾರೆ.
ಜುಲೈ 9, 2008ರಲ್ಲಿ ರಮೇಶ್ ಮುಂಡಾ ಅವರು ತಮ್ಮ ಸ್ವಕ್ಷೇತ್ರ ತಮರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಹತ್ಯೆ ಮಾಡಲಾಗಿತ್ತು. ದಾಳಿಯಲ್ಲಿ ಅವರ ಇಬ್ಬರು ಗನ್ ಮ್ಯಾನ್ ಗಳು ಸಹ ಮೃತಪಟ್ಟಿದ್ದರು.
ಅರ್ಜುನ್ ಮುಂಡಾ ಸರ್ಕಾರದಲ್ಲಿ ಸಚಿವರಾಗಿದ್ದ ಪಟಾರ್, ಉಪ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಶಿಬು ಸೊರೆನ್ ಅವರನ್ನು ಸೋಲಿಸಿದ ಖ್ಯಾತಿ ಪಡೆದಿದ್ದರು.