ದೇಶ

ಆರುಷಿ, ಹೇಮರಾಜ್ ಜೋಡಿ ಕೊಲೆ ಪ್ರಕರಣ: ರಾಜೇಶ್, ನೂಪುರ್ ದಂಪತಿ ಖುಲಾಸೆ

Lingaraj Badiger
ಲಖನೌ: ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ 14 ವರ್ಷ ಪ್ರಾಯದ ಆರುಷಿ ತಲ್ವಾರ್ ಹಾಗೂ ಹೇಮರಾಜ್ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ದಂಪತಿಯನ್ನು ಗುರುವಾರ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ. 
ಆರುಷಿ ಹಾಗೂ ಮನೆ ಕೆಲಸದಾತ ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಕೋರ್ಟ್ ರಾಜೇಶ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ರಾಜೇಶ್ ತಲ್ವಾರ್ ಮತ್ತು ನೂಪುರ್ ತಲ್ವಾರ್ ಅಲಹಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು,
ಕಳೆದ ಸೆಪ್ಟೆಂಬರ್ ಮೇಲ್ಮನವಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಬಿ.ಕೆ. ನಾರಾಯಣ ಮತ್ತು ನ್ಯಾಯಾಮೂರ್ತಿ ಎ.ಕೆ ಮಿಶ್ರಾ ಅವರನ್ನೊಳಗೊಂಡ ಪೀಠ ತೀರ್ಪನ್ನು ಕಾದಿರಿಸಿತ್ತು. ಇಂದು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.
ರಾಜೇಶ್‌ ಮತ್ತು ನೂಪುರ್‌ ಅವರೇ ಈ ಜೋಡಿ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ರಾಜೇಶ್‌ ಮತ್ತು ನೂಪುರ್‌ ದಂಪತಿ ತಮ್ಮ ಮಗಳು ಮತ್ತು ಮನೆ ಕೆಲಸದ ಸಹಾಯಕ ಹೇಮರಾಜ್‌ ಕೊಲೆಯ ಹೊಣೆಗಾರರಲ್ಲ ಎಂದು ನ್ಯಾಯಪೀಠ ಹೇಳಿದೆ.
2008 ಮೇ 16ರಂದು 14 ವರ್ಷ ಪ್ರಾಯದ ಆರುಷಿಯನ್ನು ಮನೆಯಲ್ಲಿಯೇ ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಮನೆಯ ಕೊಠಡಿಯಲ್ಲಿ ಆರುಷಿ ಶವ ಪತ್ತೆಯಾಗಿತ್ತು. ಇದಾದ 2 ದಿನಗಳ ಬಳಿಕ ಮನೆ ಕೆಲಸದಾತ ಹೇಮರಾಜ್ ಸಹ ಹತ್ಯೆಗೀಡಾಗಿದ್ದ. ಹೇಮರಾಜ್ ಶವ ಮನೆಯ ಟೆರೆಸ್ ನಲ್ಲಿ ಸಿಕ್ಕಿತ್ತು. ಈ ಎರಡೂ ಹತ್ಯೆಯನ್ನು ಆರುಷಿ ಪೋಷಕರೇ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.
SCROLL FOR NEXT