ನ್ಯೂಯಾರ್ಕ್: ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಸ್ಥಾನ ದೊರೆತಿದ್ದು, ವಿಶ್ವಸಂಸ್ಥೆ ಸಭೆಯಲ್ಲಿ ಒಟ್ಟು 15 ರಾಷ್ಟ್ರಗಳು ಹೊಸದಾಗಿ ಸೇರ್ಪಡೆಯಾಗಿವೆ.
ಟೀಂ 2018-20 ರಿಂದ ಪಾಕಿಸ್ತಾನ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಸ್ಥಾನ ಪಡೆದಿದ್ದು, 193 ಸದಸ್ಯ ರಾಷ್ಟ್ರಗಳು ಗೌಪ್ಯ ಮತದಾನ ಮಾಡಿದ್ದು ಪಾಕಿಸ್ತಾನಕ್ಕೆ ಸರಳ ಬಹುಮತ ದೊರೆತಿದೆ. ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವ ಪಡೆಯಲು 97 ಮತಗಳು ಅಗತ್ಯವಿತ್ತು. ಪಾಕಿಸ್ತಾನಕ್ಕೆ 151 ಮತಗಳು ಲಭಿಸಿದ್ದು, ಪಾಕಿಸ್ತಾನವನ್ನು ಬೆಂಬಲಿಸಿದ ವಿಶ್ವಸಮುದಾಯಕ್ಕೆ ಪಾಕ್ ನ ಪ್ರತಿನಿಧಿ ಮಲೀಹಾ ಲೋಧಿ ಧನ್ಯವಾದ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಸದಸ್ಯತ್ವ ಸಿಕ್ಕಿರುವ ಬಗ್ಗೆ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ನಫೀಜ್ ಝಕಾರಿಯಾ ಪ್ರತಿಕ್ರಿಯೆ ನೀಡಿದ್ದು, ವಿಶ್ವಸಂಸ್ಥೆಯಲ್ಲಿ ಬಹುಮತ ದೊರೆತಿರುವುದು ಜಾಗತಿಕ ಮಾನವ ಹಕ್ಕುಗಳ ವಿಷಯದಲ್ಲಿ ನಮ್ಮ ಪಾತ್ರದ ಬಗ್ಗೆ ವಿಶ್ವಸಮುದಾಯಕ್ಕೆ ಇರುವ ವಿಶ್ವಾಸದ ಪ್ರತೀಕ ಎಂದು ಹೇಳಿದ್ದಾರೆ.