ದೇಶ

ಇದೆಂಥಾ ವಿಕೃತಿ: ವೃದ್ಧನಿಗೆ ನೆಲದ ಮೇಲೆ ಉಗುಳಲು ಹೇಳಿ ಅದನ್ನೇ ನೆಕ್ಕುವ ಶಿಕ್ಷೆ!

Srinivasamurthy VN
ಪಾಟ್ನಾ: ಮನುಷ್ಯನ ವಿಕೃತಿಗೆ ಕೊನೆಯೇ ಇಲ್ಲವೇನೋ.. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಬಿಹಾರದ ನಳಂದಾದಲ್ಲಿ ಹಿರಿಯ ಜೀವವೊಂದನ್ನು ಅಮಾನವೀಯವಾಗಿ ಶಿಕ್ಷಿಸಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬಿಹಾರದ ನಳಂದಾದ ನೂರ್ ಸರಾಯ್ ಬ್ಲಾಕ್ ನ ಅಜಯ್ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೃದ್ಧನೋರ್ವ ಬಾಗಿಲು ಬಡಿಯದೇ ಗ್ರಾಮದ ಮುಖ್ಯಸ್ಥನ ಮನೆಯೊಳಗೆ ಪ್ರವೇಶ ಮಾಡಿದ್ದಕ್ಕೇ ಅತನನ್ನು ಥಳಿಸಿ ನೆಲಕ್ಕೆ  ಉಗುಳಲು ಹೇಳಿ ಬಳಿಕ ಅದನ್ನೇ ನೆಕ್ಕಲು ಬಲವಂತಪಡಿಸಲಾಗಿದೆ.
ಸುದ್ಧಿಸಂಸ್ಥೆಯೊಂದು ವರದಿ ಮಾಡಿರುವಂತೆ ಸರ್ಕಾರಿ ಯೋಜನೆಯೊಂದನ್ನು ದೊರಕಿಸಿಕೊಡುವ ಸಲುವಾಗಿ ವೃದ್ಧ ವ್ಯಕ್ತಿಯೊಬ್ಬರು ಗ್ರಾಮದ ಮುಖ್ಯಸ್ಥನ ಮನೆಗೆ ತೆರಳಿದ್ದರು. ಮನೆಯೊಳಕ್ಕೆ ಪ್ರವೇಶಿಸುವಾಗ ಬಾಗಿಲು ಬಡಿದಿಲ್ಲ  ಎಂಬ ಕಾರಣಕ್ಕಾಗಿ ಅವರೊಂದಿಗೆ ಉಗುಳಲು ಹೇಳಿ ಅದನ್ನೇ ನೆಕ್ಕಲು ಹೇಳಿದ್ದಾರೆ ಎಂದು ವರದಿ ಮಾಡಲಾಗಿದೆ. ಇದೀಗ ಗ್ರಾಮದ ಮುಖ್ಯಸ್ಥನ ಈ ಕಾರ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಸರ್ಕಾರದ ಸಚಿವ ನಂದಕಿಶೋರ್ ಯಾದವ್, “ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ. 
SCROLL FOR NEXT