ದೇಶ

ಪೊಲೀಸ್ ಅಧಿಕಾರಿಗಳ ಪರಿಹಾರ ಧನ ದ್ವಿಗುಣಗೊಳಿಸಿದ ಉತ್ತರಪ್ರದೇಶ ಸರ್ಕಾರ

Manjula VN

ಲಖನೌ: ಹುತಾತ್ಮ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಪರಿಹಾರ ಧನವನ್ನು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಶನಿವಾರ ದ್ವಿಗುಣಗೊಳಿಸಿದೆ. 

ಪೊಲೀಸ್ ಸಂಸ್ಮರಣಾ ದಿನಾಚರಣೆ ಹಿನ್ನಲೆಯಲ್ಲಿ ಲಖನೌನಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್ ಅವರು, ಹುತಾತ್ಮರಾದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಪರಿಹಾರ ಧನವನ್ನು ರೂ.20 ಲಕ್ಷದಿಂದ ರೂ.40 ಲಕ್ಷಕ್ಕೆ ದ್ವಿಗುಣಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. 
ಕಾರ್ಯಕ್ರಮದಲ್ಲಿ ಹುತಾತ್ಮರಾದ 76 ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸಿದ ಅವರು, ಹುತಾತ್ಮರಾದ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರಿಗೆ 400 ಸರ್ಕಾರಿ ಉದ್ಯೋಗಗಳನ್ನು ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ. ಶ್ಲಾಘನೀಯ ಪದಕಗಳನ್ನು 200ರಿಂದ 950ಕ್ಕೆ ಏರಿಕೆ ಮಾಡಿದ್ದಾರೆ. 

ಕರ್ತವ್ಯ ನಿರತರಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಪೊಲೀಸ್ ಅಧಿಕಾರಿಗಳಿಗೆ ನಾವು ಗೌರವವನ್ನು ಸಲ್ಲಿಸುತ್ತೇವೆ. ರಾಜ್ಯ ಕಲ್ಯಾಣಕ್ಕಾಗಿ ಪೊಲೀಸರ ಕೊಡುಗೆ ಅಪಾರವಾದದ್ದು. ಹುತಾತ್ಮ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರ ಹಿಂದೆ ರಾಜ್ಯ ಸರ್ಕಾರ ಯಾವಾಗಲೂ ಇರುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಶ್ರಮಗಳನ್ನು ಪಡುತ್ತಿದೆ. ಅಪರಾಧ ಹಾಗೂ ಭ್ರಷ್ಟಾಚಾರ ಮುಕ್ತ ರಾಜ್ಯವಾಗಿಸಲು ಈಗಾಗಲೇ ಅಭಿಯಾನವನ್ನೂ ಆರಂಭಿಸಲಾಗಿದೆ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಮಹಿಳೆಯರ ಭದ್ರತೆಗೆ ಸರ್ಕಾರ ಬದ್ಧವಾಗಿದ್ದು, ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ ಎಂದಿದ್ದಾರೆ. 

ಇದೇ ವೇಳೆ ಪೊಲೀಸ್ ಪಡೆದ ಸಾಧನೆಯನ್ನು ಶ್ಲಾಘಿಸಿರುವ ಅವರು, ಕ್ರಿಮಿನಲ್ ಗಳ ವಿರುದ್ಧ ರಾಜ್ಯ ಪೊಲೀಸರು 545 ಎನ್ ಕೌಂಟರ್ ಗಳನ್ನು ನಡೆಸಿದ್ದಾರೆ. 22 ಕ್ರಿಮಿನಲ್ ಗಳಿಗಾಗಿ ಬಹುಮಾನಗಳನ್ನು ಘೋಷಣೆ ಮಾಡಲಾಗಿತ್ತು. ಆ 22 ಕ್ರಿಮಿನಲ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. 
SCROLL FOR NEXT