ನವದೆಹಲಿ: ಭಾರತ-ಬಾಂಗ್ಲಾ ಜಂಟಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಬಾಂಗ್ಲಾಗೆ ತೆರಳಿದ್ದಾರೆ.
ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಸಚಿವರು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ವಿದೇಶಾಂಗ ಇಲಾಖೆಯ ಮಾಹಿತಿಯ ಪ್ರಕಾರ ಸುಷ್ಮಾ ಸ್ವರಾಜ್ ಹಾಗೂ ಬಾಂಗ್ಲಾದ ವಿದೇಶಾಂಗ ಸಚಿವ ಅಬುಲ್ ಹಸನ್ ಮಹ್ಮೂದ್ ಅಲಿ ಅವರೊಂದಿಗೆ ಭಾರತ-ಬಾಂಗ್ಲಾ ಜಂಟಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಾಂಗ್ಲಾದ ಥಿಂಕ್ ಟ್ಯಾಂಕ್, ವಾಣಿಜ್ಯ ಹಾಗೂ ಕೈಗಾರಿಕೆ, ಸಾಂಸ್ಕೃತಿಕ ಸಂಸ್ಥೆಗಳು, ಬಾಂಗ್ಲಾದ ನಾಯಕರೊಂದಿಗೆ ಸುಷ್ಮಾ ಸ್ವರಾಜ್ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ರೋಹಿಂಗ್ಯಾ ಬಿಕ್ಕಟ್ಟು ಚರ್ಚೆಯಾಗುತ್ತಿರುವಾಗಲೇ ಸುಷ್ಮಾ ಸ್ವರಾಜ್ ಬಾಂಗ್ಲಾಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.