ವಸುಂದರಾ ರಾಜೆ (ಸಂಗ್ರಹ ಚಿತ್ರ)
ಜೈಪುರ: ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್ ಗಳು, ಸರ್ಕಾರಿ ಅಧಿಕಾರಿಗಳನ್ನು ತನಿಖೆಗಳಿಂದ ರಕ್ಷಿಸುವುದಕ್ಕಾಗಿ ರಾಜಸ್ತಾನದ ವಸುಂಧರಾ ರಾಜೇ ಸರ್ಕಾರ ಹೊಸ ಸುಗ್ರೀವಾಜ್ಞೆ ಹೊರಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಸುಗ್ರೀವಾಜ್ಞೆ ಪ್ರಕಾರ ಅಧಿಕಾರಿಗಳು, ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾಗ ತೆಗೆದುಕೊಂಡ ಕ್ರಮಗಳ ಬಗ್ಗೆ ಅಥವಾ ಅವರ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಸರ್ಕಾರದ ಅನುಮತಿ ಇಲ್ಲದೆಯೇ ತನಿಖೆ ನಡೆಸುವಂತಿಲ್ಲ. ಅಲ್ಲದೆ, ಸರ್ಕಾರ ತನಿಖೆಗೆ ಅನುಮತಿ ನೀಡುವವರೆಗೆ ಆರೋಪಗಳ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳಿಗೂ ಸುಗ್ರೀವಾಜ್ಞೆ ನಿರ್ಬಂಧ ಹೇರುತ್ತದೆ.
(ರಾಜಸ್ತಾನ) ಕ್ರಿಮಿನಲ್ ಕಾನೂನುಗಳು (ತಿದ್ದುಪಡಿ) ಸುಗ್ರೀವಾಜ್ಞೆ-2017ನ್ನು ಹೊರಡಿಸಿ ಸೆ.7 ರಂದು ರಾಜಸ್ತಾನ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆರೋಪ ಕೇಳಿ ಬಂದವರ ವಿರುದ್ಧ ತನಿಖೆ ನಡೆಸಬೇಕೇ ಬೇಡವೇ ಎಂಬುದರ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ 6 ತಿಂಗಳು ಕಾಲಾವಕಾಶವನ್ನು ಇದು ನೀಡುತ್ತದೆ.
ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್, ಸರ್ಕಾರಿ ಅಧಿಕಾರಿ ವಿರುದ್ದ ಯಾವುದೇ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸುವಂತಿಲ್ಲ. ಇಲ್ಲವೇ ತನಿಖೆ ನಡೆಸುವಂತಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಆರು ತಿಂಗಳ ಒಳಗಾಗಿ ಸರ್ಕಾರ ತನಿಖೆಯ ಬಗ್ಗೆ ಅಧಿಕೃತವಾಗಿ ನಿರ್ಧಾರ ಕೈಗೊಳ್ಳದೇ ಹೋದಲ್ಲಿ, ತನಿಖೆ ನಡೆಸಲು ಸರ್ಕಾರ ಅನುಮತಿ ನೀಡಿದೆ ಎಂದರ್ಧ. ಯಾಪುದೇ ರೀತಿಯ ಪ್ರಕರಣದಲ್ಲಿಯೂ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಹೆಸರು, ವಿಳಾಸ ಅವರ ಕುಟುಂಬದ ವಿವರಗಳು ಹಾಗೂ ಫೋಟೋಗಳನ್ನು ಪ್ರಕಟಿಸುವುದು ಅಥವಾ ಮುದ್ರಿಸುವುದನ್ನು ಸುಗ್ರೀವಾಜ್ಞೆ ನಿಷೇಧ ಹೇರುತ್ತದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದಕ್ಕೆ ಸುಗ್ರೀವಾಜ್ಞೆ ಅವಕಾಶವಿದೆ.
ಸುಗ್ರೀವಾಜ್ಞೆ ಪ್ರಶ್ನಿಸಿ ಪಿಐಎಲ್ ದಾಖಲು
ರಾಜಸ್ತಾನ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ವಕೀಲರೊಬ್ಬರು ರಾಜಸ್ತಾನ ಹೈಕೋರ್ಟ್'ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಜಸ್ತಾನ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯು ಸಂವಿಧಾನದ 14. 19 ಮತ್ತು 21 ವಿಧಿಯನ್ನು ಹಾಗೂ ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡಿದಂತಾಗಿದೆ ಎಂದು ಹೇಳಿ ಹೋರಾಗಾರ ಭಾಗವತ್ ಗೌರ್ ಪರವಾಗಿ ವಕೀಲ ಎಕೆ. ಜೈನ್ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಚುನಾವಣಾ ಪ್ರಮಾಣ ಪತ್ರದಲ್ಲಿ ಸಾರ್ವಜನಿಕರನ್ನು ಪ್ರತಿನಿಧಿಸುವವರು ತಮ್ಮ ಕ್ರಿಮಿನಲ್ ದಾಖಲೆಗಳ ಬಗ್ಗೆಯೂ ವಿವರಗಳನ್ನು ನೀಡಬೇಕು. ಭ್ರಷ್ಟ ಅಧಿಕಾರಿಗಳ ಗುರ್ತಿಕೆ ಹಾಗೂ ಅಂತಹ ನಾಯಕರನ್ನು ಸರ್ಕಾರ ಹೇಗೆ ರಕ್ಷಣೆ ಮಾಡಲು ಸಾಧ್ಯ? ಕಾನೂನಿನ ಪ್ರಕಾರ ಸಂತ್ರಸ್ತರ ಗುರ್ತಿಕೆಯನ್ನಷ್ಟೇ ನಾವು ಗೌಪ್ಯವಾಗಿಡಬೇಕು. ಆರೋಪಿಗಳ ಗುರ್ತಿಕೆಯನ್ನಲ್ಲ ಎಂದು ವಕೀಲ ಜೈನ್ ಅವರು ಹೇಳಿದ್ದಾರೆ.
ರಾಜಸ್ತಾನ ಸರ್ಕಾರದ ಈ ಸುಗ್ರೀವಾಜ್ಞೆ ವ್ಯವಸ್ಥಿತವಾಗಿದ್ದು, ನ್ಯಾಯೋಚಿತ ತನಿಖೆಗೆ ವಿರುದ್ಧವಾಗಿದೆ. ಸರ್ಕಾರ ಸಂವಿಧಾನದ 14 ಮತ್ತು 21ನೇ ವಿಧಿಯನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಪ್ರತಿನಿಧಿಗಳನ್ನು ರಕ್ಷಣೆ ಮಾಡಲು ಹೊರಟಿದೆ. ರಕ್ಷಣೆ ಮಾಡುವುದೂ ಕೂಡ ಸಮಂಜಸವಾಗಿರಬೇಕು. ಎಲ್ಲಾ ಸಾರ್ವಜನಿಕ ಪ್ರತಿನಿಧಿಗಳನ್ನು ರಕ್ಷಣೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ರಾಜಸ್ತಾನ ಬೆನ್ನಿಗೆ ನಿಂತ ಕೇಂದ್ರ ಸಚಿವ
ಇನ್ನು ರಾಜಸ್ತಾನ ಸರ್ಕಾರದ ಈ ವಿವಾದಿತ ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ, ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಪಿ.ಪಿ. ಚೌಧರಿಯವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜಸ್ತಾನ ಸರ್ಕಾರದ ಈ ಕಾನೂನು ಉತ್ತಮವಾಗಿದ್ದು, ಸಮತೋಲಿತವಾಗಿದೆ. ಸುಗ್ರೀವಾಜ್ಞೆಯು ಮಾಧ್ಯಮ ಮತ್ತು ವೈಯಕ್ತಿಕ ಹಕ್ಕುಗಳನ್ನೂ ಪರಿಗಣಿಸುತ್ತದೆ. ಪ್ರಸ್ತುತ ಇರುವ ಪರಿಸ್ಥಿತಿಯಲ್ಲಿ ಇಂತಹ ಕಾನೂನುಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.