ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ನವದೆಹಲಿ: ಉತ್ತರಪ್ರದೇಶ ರಾಜ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರೋಗಿ ರಾಜ್ಯವಾಗಿ ಮಾರ್ಪಡಿಸಿದ್ದಾರೆಂದು ಕಾಂಗ್ರೆಸ್ ಸೋಮವಾರ ಹೇಳಿದೆ.
ಗೋರಖ್ ಪುರ ಆಸ್ಪತ್ರೆ ದುರಂತ ಪ್ರಕರಣ ಹಸಿರಿರುವಾಗಲೇ ಅಂತಹುದೇ ಮತ್ತೊಂದು ಘಟನೆ ಫರೂಕಾಬಾದ್ ಆಸ್ಪತ್ರೆಯಲ್ಲಿ ಸಂಭವಿಸಿದೆ. ಆಕ್ಸಿಜನ್ ಕೊರತೆಯಿಂದಾಗಿ ಬರೋಬ್ಬರಿ 49 ಮಕ್ಕಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿತ್ತು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶ ರಾಜ್ಯದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜ್ ಬಬ್ಬರ್ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ರಾಜ್ಯವನ್ನು 'ರೋಗಿ' ಯಾಗಿ ಬದಲಿಸುತ್ತಿದೆ. ಆಡಳಿತಾರೂಢ ಬಿಜೆಪಿ ಪಕ್ಷ ಮಕ್ಕಳ ಸಾವು ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ಗಮನ ಹರಿಸುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಉತ್ತರಪ್ರದೇಶದಿಂದ ಆಯ್ಕೆಗೊಂಡು ಅಧಿಕಾರಕ್ಕೆ ಬಂದವರು, ಹೀಗಾಗಿ ರಾಜ್ಯದಲ್ಲಿ ಏನೇ ಆದರೂ ಅದಕ್ಕೆ ಮೋದಿಯವರು ನೇರ ಜವಾಬ್ದಾರರಾಗಿರುತ್ತಾರೆ. ರಾಜ್ಯದಲ್ಲಿ ಆಡಳಿತ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಸಮರ್ಥರು. ಶೀಘ್ರದಲ್ಲಿಯೇ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಾರೆ. ಈಗಲಾದರೂ ನೀವು ಸೂಕ್ತ ಕೈಗೊಳ್ಳಲಿದಿದ್ದರೆ, ಮಕ್ಕಳು ಮತದಾರರಲ್ಲದ ಕಾರಣ ಅವರ ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯಿಲ್ಲ ಎಂಬುದು ಸಾಬೀತಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ದುರಂತ ಸಂಭವಿಸಿದ್ದರೂ, ಆರ್'ಎಸ್ಎಸ್ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಮಥುರಾಗೆ ಮುಖ್ಯಂತ್ರಿಗಳು ಹೋಗಿದ್ದಾರೆ. ಗೆಳಯನನ್ನು ಭೇಟಿ ಮಾಡಲು ವಿಮಾನದಲ್ಲಿ ಹೋಗಿದ್ದಾರೆ. ಆದರೆ, ನೋವಿನಿಂದ ಬಳಲುತ್ತಿರವ ಜನರನ್ನು ಭೇಟಿಯಾಗಲು ಅವರ ಬಳಿ ಸಮಯವಿಲ್ಲ ಎಂದಿದ್ದಾರೆ.