ನವದೆಹಲಿ: ಕಪ್ಪು ಹಣ ನಿಷೇಧ ಹಾಗೂ ನಕಲಿ ನೋಟುಗಳ ಹಾವಳಿ ತಪ್ಪಿಸುವುದಕ್ಕಾಗಿ ಕಳೆದ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರು. ಆದರೆ ಪ್ರಸ್ತುತ ಪ್ರಧಾನಿ ಮೋದಿ ಅವರು ಯಾವ ಆಶಯದೊಂದಿಗೆ ನೋಟು ರದ್ದು ಮಾಡಿದ್ದರೋ ಆ ಆಶಯವೇ ಈಡೇರಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲೇ ಗೊಂದಲವಿದ್ದು, ದೇಶದ ಆರ್ಥಿಕತೆಯನ್ನು ಅಲ್ಪಾವಧಿಯಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಅಧಿಕ ಮೌಲ್ಯದ ನೋಟುಗಳ ನಿಷೇಧದಿಂದಾಗಿ ನಿರ್ಮೂಲನೆಯಾಗಿರುವ ಕಪ್ಪುಹಣದ ಪ್ರಮಾಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಒಪ್ಪಿಕೊಂಡಿದೆ. ಈ ಬಗ್ಗೆ ಸಂಸತ್ ನ ಸಂಸದೀಯ ಸಮಿತಿಗೆ ಆರ್ ಬಿಐ ವರದಿ ನೀಡಿದ್ದು, ನೋಟು ನಿಷೇಧದಿಂದ ಎಷ್ಟು ಪ್ರಮಾಣದ ಕಪ್ಪುಹಣ ನಿರ್ಮೂಲನೆಯಾಗಿದೆ ಅಥವಾ ಲೆಕ್ಕಕ್ಕೆ ಸಿಗದ ಎಷ್ಟು ಮೊತ್ತದ ನಗದು ನೋಟು ರದ್ದಾಗಿ ಬಳಿಕ ಹೊಸ ನೋಟಿಗೆ ವಿನಿಮಯವಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ರದ್ದುಗೊಂಡ 500 ಹಾಗೂ 1000 ರೂಪಾಯಿಯ ನೋಟುಗಳ ಮೌಲ್ಯ ಸುಮಾರು 15.28 ಕೋಟಿ ರೂಪಾಯಿಗಳಾಗಿದ್ದು, ಆದರೆ ಇದು ದೃಢೀಕರಣ ಪ್ರಕ್ರಿಯೆಯ ಮೂಲಕ ಖಾತ್ರಿಯಾಗಬೇಕಿದೆ. ಅಂತೆಯೇ ನಿಯಮಿತವಾಗಿ ಇಂಥಹ ನೋಟು ರದ್ದತಿ ಪ್ರಕ್ರಿಯೆ ಜಾರಿಗೊಳಿಸಲಾಗುತ್ತದೆಯೇ ಎಂಬ ಪ್ರಶ್ನೆಗೂ ಆರ್ ಬಿಐ ಬಿಳಿ ಮಾಹಿತಿ ಇಲ್ಲ ಎಂದು ಹೇಳಿದೆ. ರದ್ದಾದ ನೋಟುಗಳ ಮೌಲ್ಯದ ಬಗ್ಗೆ ಮಾಹಿತಿ ಬಿಡುಗಡೆ ಮಾಡುವಂತೆ ವಿರೋಧ ಪಕ್ಷಗಳು ಭಾರತೀಯ ರಿಸರ್ವ್ ಬ್ಯಾಂಕನ್ನು ಒತ್ತಾಯಿಸುತ್ತಲೇ ಬಂದಿವೆ ಹಾಗೂ ಇದು ಎಷ್ಟರ ಪ್ರಮಾಣದಲ್ಲಿ ಕಪ್ಪುಹಣ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡುವಂತೆ ಆಗ್ರಹಿಸಿವೆ. ಆದರೆ ಈ ಬಗ್ಗೆ ಆರ್ ಬಿಐ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಕಳೆದ ವಾರ ವಾರ್ಷಿಕ ವರದಿಯಲ್ಲಿ ಒಟ್ಟು ರದ್ದಾದ ನೋಟುಗಳ ಮೌಲ್ಯ 15.28 ಕೋಟಿ ರೂ. ಎಂದು ಆರ್‌ಬಿಐ ಬಹಿರಂಗಪಡಿಸಿತ್ತು. ಇದೇ ಮಾಹಿತಿಯನ್ನು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಗೂ ನೀಡಿದೆ. ಆದರೆ ಇದರ ದೃಢೀಕರಣ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಮಿತಿಯ ಪ್ರಶ್ನೆಗಳಿಗೆ ಆರ್ ಬಿಐ ಸ್ಪಷ್ಟನೆ ನೀಡಿದೆ. ಇನ್ನು ನಿಷೇಧಗೊಂಡ ನೋಟುಗಳ ಎಣಿಕೆ ಪ್ರಕ್ರಿಯೆಗಾಗಿ ಆರ್ ಬಿಐ ಅಧಿಕಾರಿಗಳು ಡಬಲ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದು. ಅತ್ಯಾಧುನಿಕ ನೋಟು ಎಣಿಕೆ ಯಂತ್ರಗಳ ಮೂಲಕ ನೋಟುಗಳನ್ನು ಎಣಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಈ ನೋಟುಗಳ ಎಣಿಕೆ ಕಾರ್ಯ ಪೂರ್ಣಗೊಂಡು ರದ್ದುಗೊಂಡ ನೋಟುಗಳ ಸಂಪೂರ್ಣ ಚಿತ್ರಣ ದೊರೆಯಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics