ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಗುರ್ಮಿತ್ ಸಿಂಗ್ ದೋಷಿ ಎಂದು ಪಂಚಕುಲ ಸಿಬಿಐ ವಿಶೇಷ ಸಿಬಿಐ ತೀರ್ಪು ಪ್ರಕಟಿಸುವ ಮೊದಲೇ ಹಿಂಸಾಚಾರ ನಡೆಸಲು ಭಕ್ತರು ಹಾಗೂ ಬೆಂಬಲಿಗರಿಗೆ ಡೇರಾ ಸಚ್ಚಾ ಸೌದಾ 5 ಕೋಟಿ ರುಪಾಯಿ ಹಣ ನೀಡಿತ್ತು ಎಂಬುದು ಈಗ ಬಹಿರಂಗವಾಗಿದೆ.
ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ ಐಟಿ)ದ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಡೇರಾ ಸದಸ್ಯರಾದ ಆದಿತ್ಯಾ ಇನ್ಸಾನ್, ಹನಿಪ್ರೀತ್ ಇನ್ಸಾನ್ ಹಾಗೂ ಸುರೀಂದರ್ ಧಿಮನ್ ಇನ್ಸಾನ್ ಅವರನ್ನು ವಿಚಾರಣೆಗೊಳಪಡಿಸಿದಾಗ ಈ ಸ್ಫೋಟಕ ಮಾಹಿತಿ ಹೊರಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಡೇರಾ ಮ್ಯಾನೇಜ್ ಮೆಂಟ್ ನಿಂದ ಪಂಚಕುಲಾ ಡೇರಾ ಶಾಖೆಯ ಮುಖ್ಯಸ್ಥ ಚಾಮ್ ಕೌರ್ ಸಿಂಗ್ ಹಣವನ್ನು ಪಡೆದಿದ್ದು, ತೀರ್ಪು ಬರುವ ಮುನ್ನ ಹಿಂಸಾಚಾರ, ದೊಂಬಿ ಎಬ್ಬಿಸುವ ಹೊಣೆಗಾರಿಕೆ ಹೊತ್ತಿರುವುದಾಗಿ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಹಿಂಸಾಚಾರ ಪ್ರಕರಣದ ನಂತರ ಹೈಕೋರ್ಟ್ ಆದೇಶದ ಮೇರೆಗೆ ಚಾಮ್ ಕೌರ್ ಸಿಂಗ್ ವಿರುದ್ಧ ರಾಜದ್ರೋಹ ಪ್ರಕರಣ ದಾಖಲಿಸಲಾಗಿದ್ದು, ಮೋಹಾಲಿ ನಿವಾಸಿ ಚಾಮ್ ಕೌರ್ ತನ್ನ ಕುಟುಂಬ ಸಮೇತ ನಾಪತ್ತೆಯಾಗಿದ್ದಾನೆ.
ಅಜ್ಞಾತ ಸ್ಥಳದಲ್ಲಿದ್ದ ಚಾಮ್ ಕೌರ್ ಹಣವನ್ನು ಪಡೆದು ಗುರ್ಮೀತ್ ದೋಷಿ ಎಂದು ತೀರ್ಪು ಹೊರಬಿದ್ದ ಕೂಡಲೇ ಹಿಂಸಾಚಾರ ನಡೆಸುವಂತೆ ಪಂಜಾಬ್ ನ ವಿವಿಧೆಡೆ ಹಣವನ್ನು ಕಳುಹಿಸಿ ಕೊಟ್ಟಿದ್ದ. ಒಂದು ವೇಳೆ ಹಿಂಸಾಚಾರದಲ್ಲಿ ಯಾರು ಸಾವನ್ನಪ್ಪುತ್ತಾರೆ ಆ ಕುಟುಂಬದವರಿಗೆ ಪರಿಹಾರ ಕೊಡುವುದಾಗಿಯೂ ಭರವಸೆ ನೀಡಿರುವುದಾಗಿ ಡೇರಾ ಭಕ್ತರು ಕೂಡಾ ಹೇಳಿಕೆ ನೀಡಿರುವುದಾಗಿ ವರದಿ ತಿಳಿಸಿದೆ.