ಶ್ರೀನಗರ: ಸದಾ ಹಿಂಸಾಚಾರದಿಂದ ಸುದ್ದಿಯಾಗುವ ಜಮ್ಮು ಮತ್ತು ಕಾಶ್ಮೀರ ಈಗ ಶಾಂತಿಯ ಚಿಗುರು ಕಾಣಿಸುತ್ತಿದೆ. ಕಣಿವೆ ರಾಜ್ಯದ ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ನಾಲ್ಕು ದಿನಗಳ ಕಾಶ್ಮೀರ ಪ್ರವಾಸದಲ್ಲಿರುವ ಗೃಹ ಸಚಿವರು, ಎರಡನೇ ದಿನವಾದ ಇಂದು ರಜೌರಿ ಜಿಲ್ಲೆಗೆ ತೆರಳುವ ಮುನ್ನಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ‘ನಾನು ಎಲ್ಲರೊಂದಿಗೂ ಮಾತನಾಡಲು ಸಿದ್ಧನಿದ್ದೇನೆ. ಕಾಶ್ಮೀರ ಸಮಸ್ಯೆಯನ್ನು ನಿವಾರಿಸಲು ಸಹಕಾರ ನೀಡಲು ಸಿದ್ಧರಿರುವ ಪ್ರತಿಯೊಬ್ಬರ ಜತೆ ಮಾತನಾಡಲು ಆಹ್ವಾನ ನೀಡುತ್ತೇನೆ’ಎಂದು ಹೇಳಿದ್ದಾರೆ.
ಸಹಾನುಭೂತಿ, ಸಂವಹನ, ಸಹಬಾಳ್ವೆ, ಆತ್ಮವಿಶ್ವಾಸ, ಸಾಮರಸ್ಯ(ಐದು ‘ಸಿ’) ಎಂಬ ಈ ಐದು ಮಂತ್ರಗಳ ಪಾಲನೆಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಇರುವ ಶಾಶ್ವತ ಪರಿಹಾರ ಎಂದು ರಾಜನಾಥ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರದಲ್ಲಿನ ಶಾಂತಿಗಾಗಿ ಹಾಗೂ ಸಮೃದ್ಧಿಗಾಗಿ ನನ್ನ ಭೇಟಿ ಅವಶ್ಯಕತೆಯಿದ್ದಲ್ಲಿ ನಾನು ವರ್ಷದಲ್ಲಿ 50 ಬಾರಿಯಾದರೂ ಭೇಟಿ ನೀಡಲು ಸಿದ್ಧನಿದ್ದೇನೆ. ಅಲ್ಲದೆ, ಈ ಸಂಬಂಧವಾಗಿ ಎದುರಾಗುವ ಯಾವುದೆ ಅಡೆ–ತಡೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಕಾಶ್ಮೀರವನ್ನು ಭೂಮಿ ಮೇಲಿನ ಸ್ವರ್ಗದಂತೆ ಮಾಡುವ ಪ್ರಯತ್ನವನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಹಾಗೆಯೆ ಕಾಶ್ಮೀರಿ ಜನರ ಮೊಗದಲ್ಲಿ ಆದಷ್ಟು ಬೇಗ ನಗು ಕಾಣಲಿ ಎಂದು ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರದ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರುಪಾಯಿ ಘೋಷಿಸಿದ್ದಾರೆ. ಭಯೋತ್ಪಾದನೆಯು ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ವಿಶೇಷ ಪ್ರವಾಸೋದ್ಯಮ ಸಮಿತಿ ರಚಿಸಲು ಚಿಂತನೆ ನಡೆಸಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics