ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಗುರುಗಾಂವ್ ನ ಶಾಲಾ ಬಾಲಕನ ಹತ್ಯೆ ಪ್ರಕರಣ ಸಂಬಂಧ ಸೋಮವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಸಿಬಿಐ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಹತ್ಯೆಗೀಡಾದ ಬಾಲಕ ಪ್ರದ್ಯುಮ್ನನ ಪೋಷಕರು ತಮ್ಮ ಪುತ್ರನ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಸಂಬಂಧ ಗಮನ ಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಕರಣ ಸಂಬಂಧ ತನಿಖೆ ನಡೆಸುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸಿಬಿಐ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಸುಪ್ರೀಂ ಕೋರ್ಟ್, ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಕುರಿತಂತೆ ಗಮನ ಹರಿಸುವಂತೆ ಹೇಳಿದೆ. ಅಂತೆಯೇ 3 ವಾರದೊಳಗೆ ಉತ್ತರಿಸುವಂತೆಯೂ ಸೂಚಿಸಿದೆ.
ಇನ್ನು ಶಾಲೆಯಲ್ಲಿ ಸುರಕ್ಷತಾ ಲೋಪದ ಆರೋಪದ ಮೇರೆಗೆ ಬಂಧನ ಭೀತಿಯಲ್ಲಿರುವ ಶಾಲೆ ಮಾಲೀಕ ಹಾಗೂ ಸಿಇಒ ರ‍್ಯಾನ್ ಪಿಂಟೋ ನಿರೀಕ್ಷಣಾ ಜಾಮೀನು ಕೋರಿ ಬಾಂಬೇ ಹೈಕೋರ್ಟ್ ಮೊರೆ ಹೋಗಿದ್ದಾರೆ. ಏತನ್ಮಧ್ಯೆ ಹರ್ಯಾಣ-ಪಂಜಾಬ್ ಪೊಲೀಸ್ ಇಲಾಖೆಯ ಒಂದು ತಂಡ ಮುಂಬೈಗೆ ಆಗಮಿಸಿದ್ದು, ಮುಂಬೈನಲ್ಲಿರುವ ರ‍್ಯಾನ್ ಇಂಟರ್ ನ್ಯಾಷನಲ್ ಶಾಲೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಶಾಲೆ ಮಾಲೀಕ ರ‍್ಯಾನ್ ಪಿಂಟೋ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.