ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಟ ಕಮಲ್ ಹಾಸನ್
ಚೆನ್ನೈ: ರಾಜಕಾರಣ ಪ್ರವೇಶಿಸುವ ಕುರಿತಂತೆ ಕಳೆದ ಕೆಲವು ತಿಂಗಳಿಂದಲೂ ಒಂದಾದ ಮೇಲೊಂದರಂತೆ ಬರುತ್ತಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿರುವ ದಕ್ಷಿಣ ಭಾರತದ ಜನಪ್ರಿಯ ಚಿತ್ರ ನಟ ಕಮಲ್ ಹಾಸನ್ ಅವರು, ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಕುರಿತು ಇದೇ ಮೊದಲ ಬಾರಿಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟುವ ಕುರಿತು ಗಂಭೀರ ಚಿಂತನೆಯಲ್ಲಿ ತೊಡಗಿಕೊಂಡಿದ್ದೇನೆ. ಆದರೆ, ಇದು ನನ್ನ ಆಯ್ಕೆಯಲ್ಲ. ಅನಿವಾರ್ಯ. ತಮಿಳುನಾಡು ರಾಜಕಾರಣ ಬದಲಾಗಬಹುದು ಮತ್ತು ನಾನು ಆ ಬದಲಾವಣೆಯನ್ನು ತರಲು ಬಯಸಿದ್ದೇನೆಂದು ಹೇಳಿದ್ದಾರೆ.
ರಾಜಕಾರಣದಲ್ಲಿ ನನ್ನ ಸುಧಾರಣಾ ಗುರಿಗಳ ಜತೆ ಹೊಂದಾಣಿಯಾಗುವ ವೇದಿಕೆ ಅಥವಾ ಸಿದ್ಧಾಂತವನ್ನು ಯಾವ ರಾಜಕೀಯ ಪಕ್ಷ ಒದಗಿಸಬಲ್ಲದು ಹೇಳಿ. ರಾಜಕಾರಣ ಪ್ರವೇಶಿಸಿದ ಬಳಿಕ ನನ್ನನ್ನು ಮುಗಿಸಿಬಿಡಬಹುದು ಎಂಬ ಎಚ್ಚರಿಕೆಗಳು ಈಗಾಗಲೇ ಬರುತ್ತಿವೆ. ನಾನು ಅಥವಾ ರಾಜಕಾರಣದಲ್ಲಿನ ಭ್ರಷ್ಟಾಚಾರದ ಪೈಕಿ ಯಾವುದಾದರೂ ಒಂದು ಹೋಗಬಹುದು. ಎರಡನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ತಡವಾಗಿ ರಾಜಕೀಯ ಪ್ರವೇಶಿಸುತ್ತಿರುವ ಕುರಿತಂತೆ ಕೆಲವರು ಅವಕಾಶವಾದಿ ಎಂದು ಟೀಕಿಸುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಹೌದು, ನಾನೊಬ್ಬ ಅವಕಾಶವಾದಿ. ಸಕ್ರಿಯ ರಾಜಕಾರಣ ಪ್ರವೇಶಕ್ಕೆ ಇದೇ ಉತ್ತಮ ಸಮಯ. ಏಕೆಂದರೆ, ಎಲ್ಲವೂ ತಪ್ಪಾಗಬಹುದು. ಈಗಾಗಲೇ ತಪ್ಪಾಗುತ್ತಿರಬಹುದು. ನಮಗೆ ಉತ್ತಮ ಆಡಳಿತ ಬೇಕು. ತಮಿಳುನಾಡಿನ ಎಲ್ಲಾ ಸಮಸ್ಯೆಗಳಿಗೆ ನನ್ನಿಂದ ತತ್ ಕ್ಷಣದ ಪರಿಹಾರವೇನೂ ಸಿಗದು. ಆದರೂ ನಾನು ರಾಜ್ಯ ರಾಜಕಾರಣದಲ್ಲಿ, ಆಡಳಿತತೆಯಲ್ಲಿ ಬದಲಾವಣೆಯ ಪ್ರಕ್ರಿಯೆಯನ್ನು ಆರಂಭಿಸಲು ಬಯಸಿದ್ದೇನೆ.
ರಾಜಕಾರಣಿಗಳಷ್ಟೇ ಮತದಾರರು ಕೂಡ ಹೊಣೆಗಾರರಾಗಿರುತ್ತಾರನೆ. ನನ್ನನ್ನು ಆಯ್ಕೆ ಮಾಡಿದಾಗ ನಾನು ಮತದಾರನಿಗೆ ಉತ್ತರದಾಯಿಯಾಗಿರುತ್ತೇನೆ. ನನಗೆ ಮತ ಹಾಕಿ. ನನ್ನನ್ನು ಕೆಳಗಿಳಿಸಲು 5 ವರ್ಷಗಳ ಕಾಲ ಕಾಯಬೇಕಿಲ್ಲ. ಭರವಸೆ ಈಡೇರಿಸಲು ಆಗದಿದ್ದರೆ ಕೂಡಲೇ ನನ್ನನ್ನು ಅಧಿಕಾರದಿಂದ ಕೆಳಗಿಳಿಸಬಹುದು. ತಮಿಳುನಾಡಿನಲ್ಲೇ ನನ್ನ ರಾಜಕಾರಣ ಏಕೆ ಎಂಬ ಪ್ರಶ್ನೆಯನ್ನು ಕೇಳಬಹುದು. ನಾನು ಎಲ್ಲಾದರೂ ಒಂದು ಕಡೆ ಆರಂಭಿಸಬೇಕು. ಬೇರೊಬ್ಬರ ಮನೆಯನ್ನು ಸ್ವಚ್ಛ ಮಾಡುವ ಮೊದಲು ನನ್ನ ಮನೆಯನ್ನು ಶುಚಿಗೊಳಿಸಬೇಕು ಎಂದಿದ್ದಾರೆ.
ನಾನು ಯಾವುದೇ ರಾಜಕಾರಣಿ ಜೊತೆಗೆ ಪೋಟೋ ತೆಗೆಸಿಕೊಂಡರೆ, ನಾನು ಆ ರಾಜಕಾರಣಿಯ ಪಕ್ಷ ಸೇರಬಹುದು ಎಂಬ ಊಹಾಪೋಹಗಳು ಸೃಷ್ಟಿಯಾಗುತ್ತವೆ. ಆದರೆ, ಒಂದು ರಾಜಕೀಯ ಪಕ್ಷದ ಭಾಗವಾಗುವುದು, ಹಾರುವುದು, ಜಿಗುಯುವಂತೆ ಸುಲಭದ ಪ್ರಕ್ರಿಯೆಯಲ್ಲ. ರಾಜಕೀಯ ಪಕ್ಷ ಎಂದರೆ ಅದೊಂದು ಸಿದ್ಧಾಂತ. ನನ್ನದು ಬಣ್ಣ ಖಂಡಿತವಾಗಿಯೂ ಕೇಸರಿಯಲ್ಲ. ಆದರೆ, ನನ್ನ ಬಹುತೇಕ ಹೀರೋಗಳು ಎಡಪಂಥೀಯರಾಗಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics