ದೇಶ

ಗುರ್ದಾಸ್ಪುರ್ ಉಪ ಚುನಾವಣೆ: ಬಾಬಾ ರಾಮ್ ದೇವ್ ಸೂಚಿತ ಸ್ವರಣ್ ಸಲಾರಿಯಾ ಬಿಜೆಪಿ ಅಭ್ಯರ್ಥಿ

Lingaraj Badiger
ನವದೆಹಲಿ: ಗುರ್ದಾಸ್ಪುರ್ ಲೋಕಸಭೆ ಉಪ ಚುನಾವಣೆ ಅಭ್ಯರ್ಥಿಗಿ ಇಬ್ಬರು ಧಾರ್ಮಿಕ ಗುರುಗಳಾದ ಬಾಬಾ ರಾಮ್ ದೇವ್ ಹಾಗೂ ಶ್ರೀ ಶ್ರೀ ರವಿಶಂಕರ್ ಗುರೂಜಿ ನಡುವಿನ ತೀವ್ರ ಹೋರಾಟದ ಬಳಿಕ ಬಿಜೆಪಿ ಗುರುವಾರ ಯೋಗ ಗುರು ಸೂಚಿಸಿದ ಸ್ವರಣ್ ಸಲಾರಿಯಾ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ರವಿಶಂಕರ್ ಗುರೂಜಿ ಅವರು ದಿ.ವಿನೋದ್ ಖನ್ನಾ ಅವರ ಪತ್ನಿ ಕವಿತಾ ಖನ್ನಾ ಅವರಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರೆ, ತಮ್ಮ ಬೆಂಬಲಿಗ ಸಲಾರಿಯಾಗೆ ಟಿಕೆಟ್ ನೀಡುವಂತೆ ಬಾಬಾ ರಾಮ್ ದೇವ್ ಅವರು ಪಟ್ಟು ಹಿಡಿದ್ದಿದ್ದರು. ತೀವ್ರ ಚರ್ಚೆಯ ನಂತರ ಅಂತಿಮವಾಗಿ ಸಲಾರಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಪ್ರಭಾವಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ನಾವು ಸಮರ್ಥ ಹಾಗೂ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅನಿವಾರ್ಯತೆ ಇತ್ತು. ಹೀಗಾಗಿ ಪಕ್ಷದ ಮುಂದೆ ಇದ್ದ ಕವಿತಾ ಖನ್ನಾ ಹಾಗೂ ಸ್ವರಣ್ ಸಲಾರಿಯಾ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ನಟ, ರಾಜಕಾರಣಿ ವಿನೋದ್ ಖನ್ನಾ ಅವರ ನಿಧನದಿಂದ ತೆರವಾದ ಗುರ್ದಾಸ್ಪುರ್ ಲೋಕಸಭಾ ಕ್ಷೇತ್ರಕ್ಕೆ ಅಕ್ಟೋಬರ್ 11 ರಂದು ಉಪ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್, ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಜಖರ್ ಅವರನ್ನು ಕಣಕ್ಕಿಳಿಸಿದೆ.
SCROLL FOR NEXT