ಭುವನೇಶ್ವರ: ಎರಡು ದಿನಗಳ ಹಿಂದೆ ಮಧ್ಯರಾತ್ರಿ ನ್ಯಾಯಾಧೀಶರ ಮನೆ ಬಾಗಿಲು ಬಡಿದಿದ್ದ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ಗೆ ಒಡಿಶಾ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕೋರಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸಿಬಿಐ, ಕೇಂದ್ರ ಸರ್ಕಾರ ಹಾಗೂ ಗೃಹ ಇಲಾಖೆ ನೋಟಿಸ್ ನೀಡಿದ್ದು, ಯಾವ ಕಾರಣಕ್ಕಾಗಿ ಅಥವಾ ಯಾವ ಉದ್ದೇಶಕ್ಕಾಗಿ ಮಧ್ಯರಾತ್ರಿ ಶೋಧ ನಡೆಸಿದ್ದು ಎಂದು ಪ್ರಶ್ನಿಸಿದೆ. ಅಲ್ಲದೆ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿದೆ.
ಸಿಬಿಐ ಅಧಿಕಾರಿಗಳು ಕಳೆದ ಬುಧವಾರ ಭ್ರಷ್ಟಾಚಾರ ಪ್ರಕರಣ ಸಂಬಂಧ ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಷರತ್ ಮಸರೂರ್ ಕುದ್ದುಸಿ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಈ ವೇಳೆ ಸಿಬಿಐ ಅಧಿಕಾರಿಗಳು ಕುದ್ದುಸಿ ಮನೆಗೆ ಹೋಗುವ ಬದಲು ಹಾಲಿ ನ್ಯಾಯಾಧೀಶರ ಮನೆಗೆ ಹೋಗಿ ಶೋಧ ನಡೆಸಲು ಮುಂದಾಗಿದ್ದರು. ಇದಕ್ಕೆ ನ್ಯಾಯಾಧೀಶರ ಮನೆ ಭದ್ರತಾ ಸಿಬ್ಬಂದಿ ಒಪ್ಪಿಗೆ ನೀಡಿರಲಿಲ್ಲ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಬಾರ್ ಅಸೋಸಿಯೇಷನ್, ಈ ಕುರಿತು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಅಥವಾ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಸಿಬಿಐನ ಈ ಕ್ರಮ ನ್ಯಾಯಾಂಗ ಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿ ಎಂದಿದೆ.