ದೇಶ

ಉರಿ ಸೆಕ್ಟರ್'ನಲ್ಲಿ ಎನ್'ಕೌಂಟರ್: ಮೂವರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

Vishwanath S
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್'ನಲ್ಲಿ ಭಾರತೀಯ ಯೋಧರು ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರ ಹುಟ್ಟಡಗಿಸಿದ್ದಾರೆ. 
ಉರಿ ವಲಯದ ಕರ್ಗಿಯಾ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭಾರತೀಯ ಸೇನಾಪಡೆ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿತ್ತು. 
ಸೇನಾಪಡೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದರು. ಈ ವೇಳೆ ಸೇನಾಪಡೆ ಉಗ್ರರ ವಿರುದ್ದ ಗುಂಡಿನ ದಾಳಿ ನಡೆಸಿದ್ದು ಈ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೂ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. 
ಪ್ರಸ್ತುತ ಸ್ಥಳದಲ್ಲಿ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಈಗಾಗಲೇ ಗಡಿ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳವನ್ನು ಸುತ್ತುವರೆದಿರುವ ಸೇನಾಪಡೆ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ. 
ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಯಾವುದೇ ಭಾರತೀಯ ಯೋಧ ಗಾಯಗೊಂಡಿರುವ ವರದಿಯಾಗಿಲ್ಲ. ಇನ್ನು ಕಾರ್ಯಾಚರಣೆ ವೇಳೆ ಮೂವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಕಳೆದ ವರ್ಷ ಉರಿ ಸೆಕ್ಟರ್ ನ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 19 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇಂದು ಸಹ ಉಗ್ರರು ಇದೇ ನಿಟ್ಟಿನಲ್ಲಿ ದಾಳಿಗೆ ಮುಂದಾಗಿದ್ದು ಉಗ್ರರ ಸಂಚನ್ನು ಭಾರತೀಯ ಯೋಧರು ವಿಫಲಗೊಳಿಸಿದ್ದಾರೆ. 
SCROLL FOR NEXT