ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಕ್ಸಲರ ಕೈವಾಡವಿದೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಸೋಮವಾರ ಹೇಳಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣ ಕುರಿತಂತೆ ನಾನು ವಿಶ್ವವಿದ್ಯಾಲಯದ ಉಪ ಕುಲಪತಿಗಳಿಗೆ ಬೆಂಬಲವನ್ನು ನೀಡುತ್ತೇನೆ. ಪ್ರತಿಭಟನೆಯಲ್ಲಿ ನಕ್ಸಲರ ಕೈವಾಡವಿದೆ ಎಂಬ ಶಂಕೆಗಳು ವ್ಯಕ್ತವಾಗತೊಡಗುತ್ತಿವೆ. ಪ್ರತಿಭಟನೆಯಲ್ಲಿ ಕೆಲವರು ಉಪ ಕುಲಪತಿಗಳ ಕಚೇರಿ ಪ್ರವೇಶಿಸಬೇಕೆಂದು ಆಗ್ರಹಿಸುತ್ತಿದ್ದು, ಅಲ್ಲಿ ಹಿಂಸಾಚಾರ ಸೃಷ್ಟಿಸಲು ಯತ್ನ ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆಂಬಲ ಸೂಚಿಸಿರುವ ಅವರು ಅವರು, ಪ್ರಕರಣ ಸಂಬಂಧ ಯೋಗಿ ಅವರು ಸಮಗ್ರ ವರದಿ ಕೇಳಿರುವುದು ಸರಿಯಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿಭಟನೆ ಯಾರದ್ದೋ ನಿಯಂತ್ರಣದಲ್ಲಿದೆ ಎಂಬಂತಿದೆ. ಬೀದಿ ಕಾಮಣ್ಣರು ಕಿರುಕುಳ ನೀಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಯಾರು ಚುಡಾಯಿಸಿದ್ದರು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ. ಚುಡಾಯಿಸಿದ ಬಳಿಕ ಯುವತಿಯರು ದೂರು ನೀಡಿದ್ದಾರೋ ಅಥವಾ ಇಲ್ಲವೋ ಎಂಬುದು ತಿಳಿಯುತ್ತಿಲ್ಲ ಎಂದಿದ್ದಾರೆ.
ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ನಿನ್ನೆಯಷ್ಟೇ ತೀವ್ರವಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯುವ ಸಲುವಾಗಿ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದರು. ಅಷ್ಟೇ ಅಲ್ಲದೇ. ವಿದ್ಯಾರ್ಥಿಗಳನ್ನು ಜುಟ್ಟು ಹಿಡಿದು ಎಳೆದೊಯ್ದಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ವಿಶ್ವವಿದ್ಯಾನಿಲಯದ ಕ್ಯಾಂಪಸ್ ಹೊರಗೆ ಬೈಕ್ ನಲ್ಲಿ ಬಂದಿದ್ದ ಮೂವರು ಯುವಕರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ವಿಶ್ವವಿದ್ಯಾನಿಲಯದಲ್ಲಿ ಸಂಬಂಧಿಸಿದವರಿಗೆ ದೂರು ನೀಡಲು ಹೋದರೆ ಕ್ರಮ ಕೈಗೊಳ್ಳುವುದರ ಬದಲು ವಿದ್ಯಾರ್ಥಿ ಹಾಸ್ಟೆಲ್ ಗೆ ಹೋಗಿ ಬರುವ ವೇಳೆಯನ್ನು ಪ್ರಶ್ನಿಸಿ ಅವಹೇಳನ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics