ನರೇಂದ್ರ ಮೋದಿ, ಟಾಮ್ ಉಳುನ್ನಲಿಲ್,
ನವದೆಹಲಿ: ಐಸಿಸ್ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದ ಕೇರಳ ಪಾದ್ರಿ ಟಾಮ್ ಉಳುನ್ನಲಿಲ್ ಅವರು ಸುರಕ್ಷಿತವಾಗಿ ತಾಯಿನಾಡಿಗೆ ಮರಳಿದ್ದು, ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದ್ದಾರೆ.
ಕೇರಳ ಮೂಲದ ಪಾದ್ರಿ ಟಾಮ್ ಅವರನ್ನು ಉಗ್ರರಿಂದ ಸುರಕ್ಷಿತವಾಗಿ ಬಿಡುಗಡೆ ಮಾಡಿಸುವುದಕ್ಕಾಗಿ ವಿದೇಶಾಂಗ ಸಚಿವಾಲಯ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿತ್ತು ಮತ್ತು ಯೆಮನ್ ನೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಪಾದ್ರಿಯನ್ನು ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2016ರ ಮಾರ್ಚ್ ನಲ್ಲಿ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಟಾಮ್ ಅವರು ಇಂದು ಬೆಳಿಗ್ಗೆ 7.40ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯ್ನಾಡಿಗೆ ಬಂದಿಳಿದಿರುವುದು ಬಹಳ ಸಂತೋಷವಾಗುತ್ತಿದೆ. ನನ್ನ ರಕ್ಷಣೆಗಾಗಿ ಶ್ರಮಪಟ್ಟವರಿಗೆಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ರಾಮಪುರಂನ ಉಳುನ್ನಲಿಲ್ ಅವರು ಸಲೆಸಿಯನ್ಸ್ ಆಫ್ ಡಾನ್'ಬಾಸ್ಕೊ ಸಂಸ್ಥೆಯ ಬೆಂಗಳೂರು ಪ್ರಾಂತಕ್ಕೆ ಸೇರಿದ್ದು, ಕಳೆದ 5 ವರ್ಷಗಳಿಂದ ಯೆಮನ್ ನಲ್ಲಿದ್ದರು. ಯೆಮನ್'ನ ಏಡೆನ್ ನಲ್ಲಿ ಕ್ರೈಸ್ತ ಧರ್ಮ ಪ್ರಚಾರಕ ಸಮಿತಿಗೆ ಸೇರಿದ ಶಾಲೆಯಲ್ಲಿ ಮಾ.4 ರಂದು ಉಪನ್ಯಾಸ ನೀಡುತ್ತಿದ್ದ 56 ವರ್ಷದ ಟಾಮ್ ಉಳುನ್ನಲಿಲ್ ಅವರನ್ನು ಉಗ್ರರು ಅಪಹರಿಸಿದ್ದರು. ಸಾಕಷ್ಟು ಪರಿಶ್ರಮಗಳ ಬಳಿಕ ಫಾದರ್ ಟಾಮ್ ಅವರನ್ನು ಸೆ.12 ರಂದು ರಕ್ಷಣೆ ಮಾಡಲಾಗಿತ್ತು.