ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್
ನವದೆಹಲಿ: ಉಗ್ರರನ್ನು ನಿಗ್ರಹಿಸಲು ಕಾಶ್ಮೀರ ಜನತೆ ಭದ್ರತಾ ಪಡೆಗಳಿಗೆ ಸಹಾಯ ಮಾಡಬೇಕೆಂದು ರಕ್ಷಣಾ ತಜ್ಞರು ಶುಕ್ರವಾರ ಹೇಳಿದ್ದಾರೆ.
ನಿನ್ನೆಯಷ್ಟೇ ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಅವರ ಮನೆಗೆ ನುಗ್ಗಿದ್ದ ಉಗ್ರರು ಯೋಧನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಹತ್ಯೆ ಹಿಂದೆ ಲಷ್ಕರ್-ಇ-ತೊಯ್ಬಾ ಸಂಘಟನೆ ಕೈವಾಡವಿತ್ತು ಎಂಬ ಶಂಕೆಗಳು ವ್ಯಕ್ತವಾಗಿದ್ದವು.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಉಗ್ರರು ತಮ್ಮ ಸ್ನೇಹಿತರಲ್ಲ ಎಂಬುದನ್ನು ಕಾಶ್ಮೀರ ಜನತೆ ಈಗಲಾದರೂ ಮನಗಾಣಬೇಕಿದೆ. ಕಾಶ್ಮೀರ ಜನರಿಗೆ ಕಣ್ಣು ಹಾಗೂ ಕಿವಿಗಳಿದ್ದು, ಉಗ್ರರನ್ನು ನಿಗ್ರಹಿಸಲು ಉಗ್ರರ ಕುರಿತಂತೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಬೇಕಿದೆ ಎಂದು ಹೇಳಿದ್ದಾರೆ.
ಉಗ್ರರಿಗೆ ಪ್ರತ್ಯೇಕತಾವಾದಿಗಳು ಎಲ್ಲಾ ರೀತಿಯ ನೆರವು ಹಾಗೂ ಸಹಾಯಗಳನ್ನು ನೀಡುತ್ತಿದ್ದು, ಕಾಶ್ಮೀರದಲ್ಲಿ ಉಗ್ರರ ಅಸ್ತಿತ್ವ ಹೀಗೆಯೇ ಮುಂದುವರೆಯುತ್ತದೆ. ಕಾಶ್ಮೀರದಲ್ಲಿ ತಮ್ಮ ಅಸ್ತಿತ್ವವನ್ನು ಮುಂದುವರೆಸಲು ಉಗ್ರರು ಕಾಶ್ಮೀರಿಗರನ್ನು ಹತ್ಯೆ ಮಾಡುತ್ತಾರೆ. ಹಾಗೂ ಕಾಶ್ಮೀರದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಾರೆಂದು ತಿಳಿಸಿದ್ದಾರೆ.