ನವದೆಹಲಿ: ಮ್ಯಾನ್ಮಾರ್ ನ ಹಿಂಸಾಚಾರ ಪೀಡಿತ ರಖೀನೆ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಂ ಉಗ್ರರು ಹಿಂದೂಗಳ ನರಮೇಧ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವಂತೆ ಭಾರತ ಮ್ಯಾನ್ಮಾರ್'ಗೆ ಶುಕ್ರವಾರ ಆಗ್ರಹಿಸಿದೆ.
ಹಿಂದೂಗಳ ನರಮೇಧ ಕುರಿತಂತ ನಿನ್ನೆಯಷ್ಟೇ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು, ಹಿಂಸಾಚಾರ ಪೀಡಿದ ರಖೀನೆ ರಾಜ್ಯದಲ್ಲಿ ಹಿಂದೂಗಳ ಸಾಮೂಹಿಕ ಸಮಾಧಿ ಪತ್ತೆಯಾಗಿದೆ. ಸಮಾಧಿಗಳು ಹಿಂದೂಗಳದ್ದೇ ಎಂಬುದನ್ನು ಅಲ್ಲಿನ ಸರ್ಕಾರವೇ ಸ್ಪಷ್ಟನೆ ನೀಡಿದೆ ಎಂಬ ವರದಿಗಳನ್ನು ನೋಡಿದ್ದೇವೆ. ಭಯೋತ್ಪಾದನೆ ಯಾವುದೇ ರೀತಿಯಲ್ಲಿದ್ದರೂ ಭಾರತ ಅದನ್ನು ಖಂಡಿಸುತ್ತದೆ ಎಂದು ಹೇಳಿದ್ದಾರೆ.
ನಾಗರೀಕರನ್ನು ಗುರಿಯಾಗಿರಿಸಿಕೊಂಡು ನಡೆಸಲಾಗುವ ಘರ್ಷಣೆ ಹಾಗೂ ಯಾವುದೇ ರೀತಿಯ ಭಯೋತ್ಪಾದನೆಯನ್ನು ಭಾರತ ಸಹಿಸವುದಿಲ್ಲ. ಇಂತಹ ಅಪರಾಧ ಕೃತ್ಯಗಳಿಗೆ ಮ್ಯಾನ್ಮಾರ್ ಸರ್ಕಾರ ನ್ಯಾಯ ಒದಗಿಸಲಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ನಂಬಿದ್ದೇವೆಂದು ತಿಳಿಸಿದ್ದಾರೆ.
ಮ್ಯಾನ್ಮಾರ್ ನಲ್ಲಿ ಹಿಂಸಾಚಾರಕ್ಕೊಳಗಾಗಿರುವ ಜನರ ಕುರಿತಂತೆ ಕಾಳಜಿವಹಿಸಿದ್ದೇವೆ. ಹಿಂಸಾಚಾರದಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ಈಗಾಗಲೇ ಸೂಕ್ತ ರೀತಿಯ ಪರಿಹಾರಗಳನ್ನು ನೀಡಿದ್ದೇವೆ. ರೊಹಿಂಗ್ಯಾ ವಿವಾದ ಸಂಬಂಧ ಭಾರತ ಹಾಗೂ ಬಾಂಗ್ಲಾದೇಶಗಳು ಸದಾಕಾಲ ಸಂಪರ್ಕದಲ್ಲಿವೆ ಎಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ರೊಹಿಂಗ್ಯಾ ಮುಸ್ಲಿಂ ಉಗ್ರರು ಸುಮಾರು 100 ಹಿಂದೂಗಳನ್ನು ಅಪಹರಿಸಿ 92 ಮಂದಿಯನ್ನು ಹತ್ಯೆ ಮಾಡಿದ್ದರು ಎಂದು ಹೇಳಲಾಗುತ್ತಿತ್ತು. ಇಲ್ಲದೆ, ಇದರಲ್ಲಿ 8 ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮಂತಾಂತರಿಸಿದ್ದಾರೆಂದು ಎಂದು ವರದಿಗಳು ತಿಳಿದ್ದವು.
ಹತ್ಯೆ ಮಾಡಲಾಗಿರುವ ಹಿಂದೂಗಳ ನೂರಾರು ಸಮಾಧಿಗಳು ರಖೀನೆ ರಾಜ್ಯದಲ್ಲಿ ಪತ್ತೆಯಾಗಿದ್ದವು. ನಾಪತ್ತೆಯಾಗಿರುವ ಇನ್ನಷ್ಟು ಹಿಂದೂಗಳ ಮೃತದೇಹಗಳಿಗಾಗಿ ಅಲ್ಲಿನ ಸೇನಾ ಪಡೆಗಳು ಹುಡುಕಾಟ ನಡೆಸುತ್ತಿವೆ ಎಂದು ವರದಿಗಳಿಂದ ತಿಳಿದುಬಂದಿತ್ತು.