ನವದೆಹಲಿ; ಯೂಟ್ಯೂಬ್ ಪ್ರಧಾನ ಕಚೇರಿ ಮೇಲಿನ ಗುಂಡಿನ ದಾಳಿ ಊಹಿಸಲಾಗದ ದುರಂತ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅವರು ಬುಧವಾರ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಸಿದಂತೆ ಸಿಬ್ಬಂದಿಗಳಿಗೆ ಪತ್ರ ಬರೆದಿರುವ ಸುಂದರ್ ಪಿಚೈ ಅವರು, ಗುಂಡಿನ ದಾಳಿ ವೇಳೆ ಜನರನ್ನು ರಕ್ಷಣೆ ಮಾಡಲು ಭದ್ರತಾ ಸಿಬ್ಬಂದಿಗಳ ಕಾರ್ಯಾಚರಣೆಗೆ ಬೆಂಬಲ ನೀಡಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಗುಂಡಿನ ದಾಳಿಯಲ್ಲಿ ಯೂಟ್ಯೂಬ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 4 ಮಂದಿ ಗಾಯಗೊಂಡಿದ್ದಾರೆಂದು ಪಿಚೈ ಅವರು ತಮ್ಮ ಪತ್ರದಲ್ಲಿ ದೃಢಪಡಿಸಿದ್ದಾರೆ.
ಪ್ರಸ್ತುತ್ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಅಧಿಕಾರಿಗಳು ಸಕ್ರಿಯವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಊಹಿಸಲಾಗದ ದುರಂತಗಳು ಸಂಭವಿಸಿದಾಗ ಗೂಗಲ್ ಕುಟುಂಬದಲ್ಲಿ ಪ್ರತೀಯೊಬ್ಬರಿಗೂ ಬೆಂಬಲ ನೀಡುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸ್ಯಾನ್'ಬರ್ನೋದಲ್ಲಿರುವ ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಮಹಿಳೆಯೊಬ್ಬರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ.
ರಾತ್ರಿ 12.45ರ ಸುಮಾರಿಗೆ ಕಚೇರಿ ಬಳಿ ಬಂದಿರುವ ಮಹಿಳೆಯೋರ್ವಳು ಒಳ ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಪರಿಣಾಮ ನಾಲ್ವರು ಸಿಬ್ಬಂದಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಗುಂಡಿನ ದಾಳಿ ನಡೆಸಿದ್ದ ಮಹಿಳೆಯನ್ನು ನಸೀಮ್ ಅಘ್ದಾಮ್ ಎಂದು ಗುರ್ತಿಸಲಾಗಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಮಹಿಳೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆ. ಪ್ರಸ್ತುತ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.