ಲಖನೌ: ಬಿಜೆಪಿ ದಲಿತರಿಗೆ ಮತ್ತು ಹಿಂದೂಳಿದ ವರ್ಗಗಳಿಗೆ ಉನ್ನತ ಗೌರವ ನೀಡಿದ್ದು, ಸಂಕಟದಲ್ಲಿರುವ ಪ್ರತಿಪಕ್ಷಗಳು ದಲಿತರು ಪ್ರಚೋದಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಡಾ.ದಿನೇಶ್ ಶರ್ಮಾ ಅವರು ಗುರುವಾರ ಹೇಳಿದ್ದಾರೆ.
ಬಿಜೆಪಿ ದಲಿತರಿಗೆ ಮತ್ತು ಹಿಂದೂಳಿದ ವರ್ಗದವರಿಗೆ ಉನ್ನತ ಗೌರವ ನೀಡಿದೆ. ನಮ್ಮ ಪ್ರಧಾನಿ ಸಹ ಹಿಂದೂಳಿದ ವರ್ಗದವರು, ನಮ್ಮ ಅಧ್ಯಕ್ಷರು ದಲಿತ. ಬಿಜೆಪಿಯಿಂದಾಗಿ ಎರಡು ಪ್ರಮುಖ ಹುದ್ದೆಗಳು ಹಿಂದೂಳಿದವರಿಗೆ ಮತ್ತು ದಲಿತರಿಗೆ ಸಿಕ್ಕಿವೆ. ಸಬ್ಕಾ ಸಾಥ್, ಸಬ್ ಕಾ ವಿಕಾಸದಡಿ ಬಿಜೆಪಿ ಕೆಲಸ ಮಾಡುತ್ತಿದೆ. ಇದರಿಂದ ಹತಾಶೆಗೊಂಡಿರುವ ಪ್ರತಿಪಕ್ಷಗಳು ದಲಿತರನ್ನು ಪ್ರಚೋದಿಸಲು ಯತ್ನಿಸುತ್ತಿವೆ. ಆದರೆ ಅವರ ಪ್ರಯತ್ನ ಫಲ ನೀಡುವುದಿಲ್ಲ ಎಂದು ಶರ್ಮಾ ಅವರು ಪಿಟಿಐ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷರು ತಮ್ಮ ಜಾತಿಗೆ ಅಂಟಿಕೊಳ್ಳಬಾರದು ಎಂಬುದನ್ನು ಸಾಬೀತು ಮಾಡಿದ್ದು, ಅವರು ಜಾತಿಯನ್ನು ಮೀರಿ ಈ ಸ್ಥಾನಕ್ಕೆ ಬಂದಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.
ಕಳೆದ ಸೋಮವಾರ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪಿಟಿಐ ಶರ್ಮಾ ಅವರನ್ನು ಸಂದರ್ಶಿಸಿದೆ.