ಭಾರತ್ ಬಂದ್ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿರುವುದು
ಮುಜಾಫರ್ ನಗರ: ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ದಲಿತಪರ ಸಂಘಟನೆ ಭಾರತ್ ಬಂದ್ ಗೆ ಕರೆ ನೀಡಿದ್ದ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮುಜಾಫರ್ ನಗರ ಜಿಲ್ಲಾ ಬಿಎಸ್ಪಿ ಅಧ್ಯಕ್ಷ ಕಮಲ್ ಗೌತಮ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಬಿಎಸ್ಪಿ ಮುಖಂಡನ ವಿರುದ್ಧ ಪೊಲೀಸರು ಡಜನ್ ಗೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದು, ಶುಕ್ರವಾರ ರಾತ್ರಿ ಗೌತಮ್ ನನ್ನು ಬಂಧಿಸಲಾಗಿದೆ.
ಕಮಲ್ ಗೌತಮ್ ನನ್ನು ಇಂದು ಪೊಲೀಸರು ಕೋರ್ಟ್ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಏಪ್ರಿಲ್ 20ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ನಿಷೇಧಾಜ್ಞೆ ಉಲ್ಲಂಘಿಸಿದ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಮಲ್ ಗೌತಮ್ ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನಂತ್ ದೇವ್ ಅವರು ತಿಳಿಸಿದ್ದಾರೆ.
ಏಪ್ರಿಲ್ 2ರಂದು ನಡೆದಿದ್ದ ಭಾರತ್ ಬಂದ್ ಹಿಂಸಾತ್ಮಕ ಪ್ರತಿಭಟನೆಯಲ್ಲಿ ದೇಶಾದ್ಯಂತ 10 ಮಂದಿ ಮೃತಪಟ್ಟಿದ್ದರು ಮತ್ತು ಪೊಲೀಸರು ಸೇರಿದಂತೆ 65 ಮಂದಿ ಗಾಯಗೊಂಡಿದ್ದರು.
ಕಳೆದ ಮಾರ್ಚ್ 20ರಂದು ಸರ್ವೋಚ್ಚ ನ್ಯಾಯಾಲಯ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಗಳನ್ನು ನಿರ್ಭಯದಿಂದ ನಿರ್ವಹಿಸಲು ಮತ್ತು ಬ್ಲಾಕ್ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಎಸ್‌ಸಿ/ಎಸ್‌ಟಿ ಕಾಯಿದೆಯ ಕಾಠಿನ್ಯವನ್ನು ಕಡಿಮೆ ಮಾಡುವ ಆದೇಶವನ್ನು ಪ್ರಕಟಿಸಿತ್ತು. ಇದರಿಂದಾಗಿ ಎಸ್‌ಸಿ/ಎಸ್‌ಟಿ ಕಾಯಿದೆ ದುರ್ಬಲವಾಯಿತೆಂದು ಭಾವಿಸಿದ ದಲಿತರು ಭಾರತ್ ಬಂದ್ ಕರೆ ನೀಡಿದ್ದರು.