ಶಿಲ್ಲಾಂಗ್(ಮೇಘಾಲಯ): ಮೇಘಾಲಯದ ಆರೋಗ್ಯ ಸಚಿವ ಎ.ಎಲ್ ಹೆಕ್ ಅವರ ಪುತ್ರ ಐಬನ್ಶಾರೈ ನೊಂಗ್ಸಿಜ್ ತಮ್ಮ ಮರ್ಸಿಡಿಸ್ ಕಾರ್ ಪೋಲೀಸರಿದ್ದ ಬೈಕ್ ಗೆ ಗುದ್ದಿದ ಕಾರಣ ಓರ್ವ ಪೋಲೀಸ್ ಪೇದೆ ಸಾವನ್ನಪ್ಪಿದ್ದರೆ ಇನ್ನೋರ್ವ ಪೇದೆ ಗಾಯಗೊಂಡಿದ್ದಾರೆ, ನಿನ್ನೆ ಮಧ್ಯ ರಾತ್ರಿ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದರು.
ನಗರದ ಫೋರ್ತ್ ಫರ್ಲಾಂಗ್ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ. ಘಟನೆ ವೇಳೆ ಮಂತ್ರಿಗಳ ಪುತ್ರ ಚಾಲಕನ ಆಸನದಲ್ಲಿದ್ದರೆಂದು ಈಸ್ಟ್ ಕಾಸಿ ಹಿಲ್ಸ್ ಜಿಲ್ಲೆಯ ಎಸ್ಪಿ ಡೇವಿಸ್ ಮರಾಕ್ ಪಿಟಿಐಗೆ ತಿಳಿಸಿದ್ದಾರೆ.
ಸಶಸ್ತ್ರ ಪಡೆಯಲ್ಲಿ ಜೈಲು ಸಿಬ್ಬಂದಿಯಾಗಿದ್ದ ಪೇದೆ ಪಿ. ಡಿ. ಸಂಗ್ಮಾ ಅವರನ್ನು ಅಪಘಾತಕ್ಕೊಳಗಾದ ತಕ್ಷಣ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಅದೇ ವೇಳೆ ಬೈಕಿನಲ್ಲಿದ್ದ ಇನ್ನೋರ್ವ ಪೇದೆಯ ಸ್ಥಿತಿ ಗಂಭೀರವಾಗಿದೆ.
ಅಪಘಾತಕ್ಕೆ ಕಾರಣವಾದ ಮಂತ್ರಿಗಳ ಪುತ್ರ ಪೋಲೀಸ್ ಪೇದೆಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರೆಂದು ಪೋಲೀಸರು ಹೇಳಿದ್ದಾರೆ.
ಸಧ್ಯ ಎರಡೂ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಂತ್ರಿಗಳ ಮಗನೇ ಅಪಘಾತ ನಡೆದಾಗ ಚಾಲಕನ ಆಸನದಲ್ಲಿದ್ದ ಎನ್ನಲಾಗುತಿದ್ದು ಈ ಸಂಬಂಧ ತನಿಖೆ ಕೈಗೊಳ್ಳಲಾಗುವುದು ಇದಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಕೈ ಸೇರಿದ ಬಳಿಕ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics