ದೇಶ

ಉನ್ನಾವೊ ಅತ್ಯಾಚಾರ ಆರೋಪಿ ಬಿಜೆಪಿ ಶಾಸಕನನ್ನು ಬಂಧಿಸಿ: ಅಲಹಾಬಾದ್ ಹೈಕೋರ್ಟ್ ಆದೇಶ

Lingaraj Badiger
ಉನ್ನಾವೊ (ಉತ್ತರ ಪ್ರದೇಶ): ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಈ ಕೂಡಲೇ ಬಂಧಿಸುವಂತೆ ಅಲಹಬಾದ್ ಹೈಕೋರ್ಟ್ ಶುಕ್ರವಾರ ಸಿಬಿಐಗೆ ಆದೇಶಿಸಿದೆ.
ಈ ವೇಳೆ ಆರೋಪಿ ಶಾಸಕನನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಬಂಧಿಸಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಕೋರ್ಟ್ ತಿಳಿಸಿದ್ದಾರೆ.
ಆರೋಪಿ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ಮತ್ತು ಮೇ 2ರಂದು ಪ್ರಕರಣದ ಪ್ರಗತಿ ವರದಿ ನೀಡುವಂತೆ ಸಿಬಿಐ ತನಿಖಾಧಿಕಾರಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ.
ಈ ಮಧ್ಯೆ, ಉತ್ತರ ಪ್ರದೇಶ ಸರ್ಕಾರ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದ್ದು, ಕಾನೂನು ಪ್ರಕರಣ ತನಿಖೆ ನಡೆಸಲಿದೆ ಎಂದು ಹೈಕೋರ್ಟ್ ಗೆ ತಿಳಿಸಿದೆ.
ಶಾಸಕ ಕುಲದೀಪ್ ಸಿಂಗ್ ವಿರುದ್ಧ, ಭಾರತೀಯ ದಂಡ ಸಿಂಹಿತೆ 363, 366 376 ಹಾಗೂ 506 ಅಡಿ ಗುರುವಾರ ಎಫ್ ಐ ಆರ್ ದಾಖಲಾಗಿದ್ದು, ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಶಾಸಕರಿಂದ ಅತ್ಯಾಚಾರ ನಡೆದಿತ್ತು, ಶಾಸಕರ ಜೊತೆಗೆ ಅವರ ಸಹೋದರ ಕೂಡ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆಯ ಪೋಷಕರು ಆರೋಪಿಸಿದ್ದರು. 
ದೂರು ವಾಪಸ್ ತೆಗೆದುಕೊಳ್ಳುವಂತೆ ಆಗ್ರಹಿಸಿ ಏಪ್ರಿಲ್ 3 ರಂದು ಶಾಸಕರ ಸಹೋದರ ಅತುಲ್ ಸಿಂಗ್ ಸೆಹರ್ ಸಂತ್ರಸ್ತೆಯ ತಂದೆ ಮೇಲೆ ಹಲ್ಲೆ ನಡೆಸಿದ್ದು, ಈ ಪ್ರಕರಣ ಸಂಬಂಧ ಆರು ಮಂದಿ ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಏಪ್ರಿಲ್ 8 ರಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆ ಸಂತ್ರಸ್ತೆ ಮತ್ತವಳ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದ್ದರು.
SCROLL FOR NEXT