ನವದೆಹಲಿ : ಭಾರತದ ಸಂವಿಧಾನ ಮತ್ತು ಪರಿಶಿಷ್ಟ ಜಾತಿ, ವರ್ಗದವರ ಮೇಲಿನ ದಾಳಿ ಪ್ರಕರಣವನ್ನು ಪ್ರಮುಖ ವಿಷಯವನ್ನಾಗಿ ಇಟ್ಟುಕೊಂಡು ದಲಿತರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ. 23 ರಂದು ಸಂವಿಧಾನ ರಕ್ಷಿಸಿ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ದಲಿತ ಸಮುದಾಯದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಗಮನ ಸಳೆಯುವ ನಿಟ್ಟಿನಲ್ಲಿ ಅಂದು ಕಾಂಗ್ರೆಸ್ ಹಾಲಿ ಹಾಗೂ ಮಾಜಿ ಶಾಸಕರುಗಳು, ಜಿಲ್ಲಾ ಪರಿಷತ್, ಸ್ಥಳೀಯ ಸಂಸ್ಥೆಗಳು , ಹಾಗೂ ಪಂಚಾಯತ್ ಸಮಿತಿಗಳ ಕಚೇರಿ ಮುಂದೆ ಮುಂದೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.
ನವದೆಹಲಿಯ ತಾಲ್ ಕೊತ್ರಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಪ್ರಾದೇಶಿಕ ಘಟಕಗಳು, ಯುವಕರು, ಮಹಿಳೆಯರು ಸೇವಾ ಘಟಕಗಳು ಪಾಲ್ಗೊಳ್ಳಲಿದ್ದಾರೆ.
ಈ ಸಮುದಾಯ ತಲುಪುವ ನಿಟ್ಟಿನಲ್ಲಿ ರಾಜ್ಯಗಳಲ್ಲಿಯೂ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಮುಖ್ಯಸ್ಥ ಹಾಗೂ ಸಂಘಟಕ ನಿತಿನ್ ರಾವತ್ ತಿಳಿಸಿದ್ದಾರೆ.
ಬಿಜೆಪಿ ಆಡಳಿತಾವಧಿಯಲ್ಲಿ ಸಂವಿಧಾನ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ಸಮುದಾಯದವರ ಶಿಕ್ಷಣ, ಉದ್ಯೋಗ ಅವಕಾಶವನ್ನು ನಿರಾಕರಿಸಲಾಗಿದೆ. ವಿವಿಧ ಕಾರಣಗಳಿಂದ ಈ ವರ್ಗ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದೆ. ಸಭೆಯಲ್ಲಿ ಇದರ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ರಾವತ್ ಹೇಳಿದ್ದಾರೆ.
ದೇಶದಲ್ಲಿನ ಒಟ್ಟು ಮತದಾರರಲ್ಲಿ ಶೇ.17 ರಷ್ಟು ದಲಿತರಿದ್ದಾರೆ. ಈ ಸಮುದಾಯಕ್ಕೆ ಸಂಸತ್ತಿನಲ್ಲಿ ಶೇ. 84 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಸಂಸದರು ಬಿಜೆಪಿಯವರೇ ಆಗಿದ್ದಾರೆ. ಹಾಗಾಗಿಯೇ ಉತ್ತರ ಪ್ರದೇಶ , ಬಿಹಾರದಂತಹ ರಾಜ್ಯಗಳಲ್ಲಿ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.