ಅಮರಾವತಿ: ತಮ್ಮ ದೇಹದ ಅಂಗಾಂಗಳನ್ನುದಾನ ಮಾಡುವುದಾಗಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಸೋಮವಾರ ಘೋಷಿಸಿದ್ದಾರೆ.
ಇಂದಿನಿಂದ ಆರಂಭವಾಗಿರುವ ಅಂಗಾಂಗ ದಾನ ವಾರ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಆಂಧ್ರ ಸಿಎಂ ನಿಮ್ಮ ಅಂಗಾಗಳನ್ನು ದಾನ ಮಾಡುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದರು. ಇಂದು ಸ್ವತಃ ತಾವೇ ದೇಹ ದಾನ ಮಾಡುವುದಾಗಿ ಹೇಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಮುಖ್ಯಮಂತ್ರಿಗಳ ಅಂಗಾಂಗ ದಾನ ಕರೆಗೆ ಸ್ಪಂದಿಸಿದ ನಗರಸಭೆ ಪ್ರದೇಶಗಳ ಬಡತನ ನಿರ್ಮೂಲನೆ ಮಿಷನ್(ಎಂಇಪಿಎಂಎ) ಅಂಗಾಂಗ ದಾನ ಒಂದು ಚಳವಳಿಯಾಗಿ ತೆಗೆದುಕೊಂಡಿದೆ.
ಇದುವರೆಗೆ 1.20 ಲಕ್ಷ ಜನರು ತಮ್ಮ ಅಂಗಾಂಗ ದಾನ ಮಾಡಿದ್ದು, ಎಂಇಪಿಎಂಎ ಅವರಿಂದ ಒಪ್ಪಿಗೆ ಪತ್ರಗಳನ್ನು ಪಡೆದಿದೆ.
ಅಪಘಾತದಲ್ಲಿ ಮೆದುಳು ನಿಷ್ಕ್ರಿಯೆಗೊಂಡರೆ, ಅವರ ಅಂಗಾಂಗಳನ್ನು ದಾನ ಮಾಡುವ ಬಗ್ಗೆ ಅರಿವು ಮೂಡಿಸಬೇಕು. ಜನ ಕುರುಡು ನಂಬಿಕೆಯಿಂದ ಹೊರಗೆ ಬರಬೇಕು ಮತ್ತು ದೇಹ ದಾನ ಮಾಡಬೇಕು ಎಂದಿರುವ ಆಂಧ್ರ ಸಿಎಂ, ಅಂಗಾಂಗ ದಾನ ವಾರ ಆರಂಭವಾದ ಒಂದೇ ದಿನದಲ್ಲಿ 1.20 ಲಕ್ಷ ಮಂದಿ ದಾನ ಮಾಡಿರುವುದು ಐತಿಹಾಸಿಕ. ಅಂತಹ ಉತ್ತಮ ಕೆಲಸ ಮಾಡುವತ್ತಿರುವ ಎಂಇಪಿಎಂಎ ಅನ್ನು ನಾನು ಅಭಿನಂದಿಸುತ್ತೇನೆ ಎಂದು ಚಂದ್ರಬಾಬು ನಾಯ್ಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.