ನವದೆಹಲಿ: ಪ್ರತಿಪಕ್ಷಗಳ ಗದ್ದಲದ ನಡುವೆಯೇ ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿ ವಿಧೇಯಕ ಸೇರಿದಂತೆ 21 ವಿಧೇಯಕಗಳನ್ನು ಅಂಗೀಕರಿಸುವ ಮೂಲಕ 17 ದಿನಗಳ ಸಂಸತ್ ಮುಂಗಾರು ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ.
ಇಂದು ಲೋಕಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಈ ಹಿಂದಿನ ಬಜೆಟ್ ಅಧಿವೇಶನಕ್ಕಿಂತಲೂ ಬಾರಿ ಕಲಾಪ ಹೆಚ್ಚು ಫಲಪ್ರದ ಮತ್ತು ತೃಪ್ತಿಕರವಾಗಿದೆ ಎಂದು ಹೇಳಿದ್ದಾರೆ.
ಒಟ್ಟು 112 ಗಂಟೆಗಳ ಕಾಲ ನಡೆದ ಕಲಾಪದಲ್ಲಿ 8 ಗಂಟೆ 26 ನಿಮಿಷ ಗದ್ದಲದಲ್ಲಿಯೇ ಕಳೆಯಲಾಗಿದೆ. ಉಳಿದ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಟಿಡಿಪಿ ಹಾಗೂ ಇತರೆ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಕುರಿತು 11 ಗಂಟೆ 45 ನಿಮಿಷ ಚರ್ಚಿಸಲಾಗಿದೆ. ಚರ್ಚೆಯ ನಂತರ ನಿರ್ಣಯಕ್ಕೆ ಸೋಲಾಯಿತು.
17 ದಿನಗಳ ಅಧಿವೇಶನದಲ್ಲಿ ಭ್ರಷ್ಟಾಚಾರ ತಡೆ(ತಿದ್ದುಪಡಿ) ವಿಧೇಯಕ, ಅಪರಾಧ ಕಾನೂನು ತಿದ್ದುಪಡಿ ವಿಧೇಯಕ, ಆರ್ಥಿಕ ಅಪರಾಧ ತಡೆ ಮಸೂದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ವಿಧೇಯಕ ಸೇರಿದಂತೆ 21 ವಿಧೇಯಕಗಳನ್ನು ಅಂಗೀಕರಿಸಲಾಗಿದೆ.
ಈ ಅಧಿವೇಶನದಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಪುನರ್ ಸ್ಥಾಪಿಸುವ ಮಸೂದೆ ಹಾಗೂ ಹಿಂದೂಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನದಂತಹ ಪ್ರಮುಖ ಮಸೂದೆಗಳ ಅಂಗೀಕರಿಸಲಾಗಿದೆ ಎಂದು ಮಹಾಜನ್ ಹೇಳಿದ್ದಾರೆ.
ಇನ್ನು ರಾಜ್ಯಸಭೆಯಲ್ಲಿ ಕೊನೆಯ ದಿನವಾದ ಇಂದು ಸಹ ರಾಫೆಲ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಪ್ರತಪಿಕ್ಷಗಳು ಧರಣಿ ನಡೆಸಿದ ಹಿನ್ನೆಲೆಯಲ್ಲಿ ನೂತನ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ ಸಿಂಗ್ ಅವರು, ಕಲಾಪವನ್ನು ಎರಡು ಬಾರಿ ಮುಂದೂಡಿದರು. ಮೂರನೇ ಬಾರಿ ಸಭೆ ಸೇರಿದಾಗಲು ಗದ್ದಲ ಸೃಷ್ಟಿಸಿದ್ದರಿಂದ ಹರಿವಂಶ ನಾರಾಯಣ ಸಿಂಗ್ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos