ನವದೆಹಲಿ: ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ...
*ಮಧ್ಯಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣ ದೇವಿ ದಂಪತಿಗಳ ಮಗನಾಗಿ ಡಿಸೆಂಬರ್ 25, 1924 ರಂದು ಗ್ವಾಲಿಯರ್ ನಲ್ಲಿ ಜನನ.
*ಹದಿಹರೆಯದಲ್ಲಿ ಬ್ರಿಟಿಷರ ವಿರುದ್ಧ ಸಮರಕ್ಕಿಳಿದು ಜೈಲು ಸೇರಿದ್ದರು ವಾಜಪೇಯಿ. ಬ್ರಿಟಿಷರ ವಿರುದ್ಧ ಹೋರಾಟದ ಹೊತ್ತಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.
*1950ರಲ್ಲಿ ಆರೆಸ್ಸೆಸ್ ಮ್ಯಾಗಜಿನ್ ನಡೆಸುವುದಕ್ಕೋಸ್ಕರ ವಾಜಪೇಯಿ ಕಾನೂನು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಆಮೇಲೆ ಆರೆಸ್ಸೆಸ್ಸ್ ಅನ್ನು ಪೋಷಿಸಿ, ಬಿಜೆಪಿಯ ಶಕ್ತಿಯನ್ನಾಗಿ ಮಾರ್ಪಡಿಸಿದರು.
* 1942-1945 ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಇವರು ಆಮೇಲೆ ಆರೆಸ್ಸೆಸ್ಸ್ ಸೇರಿದರು.
*ವಾಜಪೇಯಿ ಅವರು ಭಾರತೀಯ ಜನ ಸಂಘದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದರು.
*1953ರಲ್ಲಿ ಕಾಶ್ಮೀರದಲ್ಲಿ ಮೂಖರ್ಜಿ ಅಮರಣಾಂತ ಉಪವಾಸ ಮಾಡಿದಾಗ ವಾಜಪೇಯಿ ಅವರಿಗೆ ಸಾಥ್ ನೀಡಿದ್ದರು. ಈ ಹೋರಾಟದ ನಂತರ ಅಸೌಖ್ಯದಿಂದ ಮೂಖರ್ಜಿ ಮರಣ ಹೊಂದಿದರು. ಅವರ ಸಾವು ಯುವಕ ವಾಜಪೇಯಿಯನ್ನು ತುಂಬಾ ಕಂಗೆಡಿಸಿತ್ತು.
*ಮೂಖರ್ಜಿಯ ಸಾವು ನಂತರ ವಾಜಪೇಯಿ 1957ರಲ್ಲಿ ಮೊದಲ ಬಾರಿ ಸಂಸತ್ ಚುನಾವಣೆಯಲ್ಲಿ ವಿಜಯ ಸಾಧಿಸಿದರು.
*1957 ರಿಂದ 2009ರ ವರೆಗೆ ಲೋಕಸಭೆ, ಸಂಸತ್ನ ಕೆಳಮನೆಯಲ್ಲಿ ವಾಜಪೇಯಿ ಅವರು ಸೇವೆ ಸಲ್ಲಿಸಿದರು.
*4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು.
*1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಅವರ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಅಧಿಕಾರ ಕಳೆದುಕೊಂಡಿತು.
*1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು .
*ಮೊರಾರ್ಜಿ ದೇಸಾಯಿ ಅವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ವಾಜಪೇಯಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಅವರಿಗೆ ಹೆಚ್ಚು ಕೀರ್ತಿ ತಂದುಕೊಟ್ಟಿತ್ತು.
*1999ರಲ್ಲಿ ಪಾಕಿಸ್ತಾನಕ್ಕೆ ಬಸ್ ಸಂಪರ್ಕ ಕಲ್ಪಿಸಿ ಪಾಕ್ ಭೇಟಿ ಮಾಡಿದ್ದು ಅವರ ಸಾಧನೆಗಳಲ್ಲೊಂದು. ಅಲ್ಲದೇ ಇದೇ ವಿಚಾರ ವಿವಾದಕ್ಕೂ ಕಾರಣವಾಗಿತ್ತು.
*ಬ್ರಹ್ಮಚಾರಿಯಾಗಿದ್ದ ವಾಜಪೇಯಿ ಉತ್ತಮ ವಾಗ್ಮಿ ಮತ್ತು ಕವಿಯಾಗಿದ್ದಾರು.
*ಭಾರತ ಸರ್ಕಾರ ಇವರಿಗೆ 1992ರಲ್ಲಿ ಪದ್ಮ ವಿಭೂಷಣ ಮತ್ತು ಮಾರ್ಚ್ 27, 2015 ರಂದು ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics