ಕೇರಳ ಪ್ರವಾಹ; ಪರಿಸ್ಥಿತಿ ಮತ್ತಷ್ಟು ಗಂಭೀರ, 79ಕ್ಕೇರಿದ ಸಾವಿನ ಸಂಖ್ಯೆ, ರಾಜ್ಯಾದ್ಯಂತ ರೆಡ್ ಅಲರ್ಟ್
ತಿರುವನಂತರಪುರ: ಹಲವು ದಿನಗಳಿಂದ ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಜ್ಯ ಬಹುತೇಕ ಭಾಗಗಳಲ್ಲಿ ಭಾರೀ ಅನಾಹುತಗಳು ಸೃಷ್ಟಿಯಾಗಿವೆ. ಇದರೊಂದಿಗೆ ಕೆಲ ದಿನಗಳಲ್ಲಿ ಮುಂಗಾರು ಮಳೆಗೆ ಬಲಿಯಾದವರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು ಗುರುವಾರ ತಿಳಿದುಬಂದಿದೆ.
ನಿನ್ನೆ ಒಂದೇ ದಿನದಲ್ಲಿ ಮಳೆಯಿಂದ ಸಂಭವಿಸಿದ ದುರಂತದಲ್ಲಿ 28 ಮಂದಿ ಸಾವನ್ನಪ್ಪಿದ್ದರು. ಇದರಂತೆ ಇಂದೂ ಕೂಡ ಮಳೆಯ ಪ್ರತಾಪ ಮುಂದುವರೆದ ಹಿನ್ನಲೆಯಲ್ಲಿ ಮತ್ತೆ 12 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಸಾವಿನ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.
ಮಳೆಯ ಪ್ರತಾಪ ಕಾಲ ಕಳೆಯುತ್ತಿದ್ದಂತೆಯೇ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಅಲ್ಲಿನ ಸರ್ಕಾರ ನಿನ್ನೆ ಸಂಜೆಯೇ ಇಡೀ ರಾಜ್ಯದಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ರನ್ನಿ, ಅರನ್ಮುಲಾ ಹಾಗೂ ಕೊಝೆಂಚೆರ್ರಿ ಎಂಬ ಪ್ರದೇಶಗಳಲ್ಲಿ ಹಲವು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಮಳೆಯ ಅನಾಹುತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಕೇರಳ ರಾಜಧಾನಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಆದರೆ, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಗಳು ಮುಂದುವರೆದಿದೆ.
ಇದೇ ವೇಳೆ ಕೊಚ್ಚಿ ವಿಮಾನ ನಿಲ್ದಾಣದೊಳಗೆ ನೀರು ನುಗ್ಗಿದ ಪರಿಣಾಮ ಶನಿವಾರದವರೆಗೆ ಅಲ್ಲಿ ವಿಮಾನಗಳ ಸಂಚಾರ ನಿಷೇಧಿಸಲಾಗಿದೆ. ಇದಲ್ಲದೆ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲೂ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಸಾಮಾನ್ಯ ಜನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹೀಗಾಗಿ ವಾಯುಪಡೆಗೆ ಸೇರಿದ ರನ್ ವೇಗಳಲ್ಲಿ ಸಣ್ಣ ವಿಮಾನಗಳನ್ನು ಇಳಿಸಲು ಅವಕಾಶ ಕೊಡುವಂತೆ ಕೇರಳ ಮುಖ್ಯಮಂತ್ರಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ 35 ಅಣೆಕಟ್ಟುಗಳು ಪೂರ್ಣವಾಗಿ ಭರ್ತಿಯಾಗಿದ್ದು, ಅವುಗಳಿಂದ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಪ್ರದೇಶ ಮತ್ತು ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos