ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಮತ್ತಷ್ಟು ಕ್ಷೀಣವಾಗಿದ್ದು, ಅವರ ದೇಹ ಚಿಕಿತ್ಸೆ ಸ್ಪಂದಿಸುತ್ತಿಲ್ಲ ಎಂದು ಏಮ್ಸ್ ಆಸ್ಪತ್ರೆ ಅಧಿಕಾರಿಗಳು ನೂತನ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಇಂದು ಬೆಳಗ್ಗೆ ನೂತನ ಪತ್ರಿಕಾ ಪ್ರಕಟಣೆ ಹೊರಡಿಸಿದ ಏಮ್ಸ್ ಆಸ್ಪತ್ರೆ ಅಧಿಕಾರಿಗಳು ವಾಜಪೇಯಿ ಆರೋಗ್ಯ ಗಂಭೀರವಾಗಿದ್ದು, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಇಂದು ಸಂಜೆ ನೂತನ ಪತ್ರಿಕಾ ಪ್ರಕಟಣೆ ನೀಡುವುದಾಗಿಯೂ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ವಾಜಪೇಯಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯಲ್ಲಿಡಲಾಗಿದೆ ಎಂದು ಈಗಾಗಲೇ ಏಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಯಿಂದ ವಾಜಪೇಯಿ ಆರೋಗ್ಯ ಬಿಗಡಾಯಿಸಿದೆ. ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಕಿಡ್ನಿ ಹಾಗೂ ಮೂತ್ರಕೋಶದ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಜೂ.11ರಂದು ವಾಜಪೇಯಿ ಅವರನ್ನು ಏಮ್ಸ್ಗೆ ಸೇರಿಸಲಾಗಿದೆ. 93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾದ ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿರ್ವಹಿಸುತ್ತಿದೆ. ಇದೇ ಅವರ ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಮುಖ ರಾಜಕೀಯ ನಾಯಕರು ದೌಡು
ವಾಜಪೇಯಿ ಆರೋಗ್ಯ ಬಿಗಡಾಯಿಸಿರುವ ಹಿನ್ನಲೆಯಲ್ಲಿ ರಾಜಕೀಯ ಪ್ರಮುಖ ನಾಯಕರು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ವಾಜಪೇಯಿ ಆರೋಗ್ಯ ಹದಗೆಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ಏಮ್ಸ್ಗೆ ಭೇಟಿ ನೀಡಿ ವೈದ್ಯರ ಜತೆ 50 ನಿಮಿಷ ಚರ್ಚಿಸಿದರು. ಅಲ್ಲದೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವರಾದ ರಾಜನಾಥ್ ಸಿಂಗ್, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಸಚಿವರಾದ ಪಿಯೂಷ್ ಗೋಯಲ್, ಹರ್ಷವರ್ಧನ್, ಸ್ಮೃತಿ ಇರಾನಿ, ಸುರೇಶ್ ಪ್ರಭು, ಅಶ್ವಿನಿಕುಮಾರ್ ಚೌಭೆ ಹಾಗೂ ಹಲವು ಬಿಜೆಪಿ ನಾಯಕರು ಏಮ್ಸ್ಗೆ ಭೇಟಿಕೊಟ್ಟಿದ್ದರು.
ಅಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ.
ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಮುಖ ನಾಯಕರು ಆಸ್ಪತ್ರೆಗೆ ಕಡೆ ದೌಡಾಯಿಸುತ್ತಿದ್ದು, ಈ ಹಿನ್ನೆಲ್ಲೆಯಲ್ಲಿ ಆಸ್ಪತ್ರೆ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics