ನವದೆಹಲಿ: ಮೇಲಿನ ಯಾವುದೂ ಅಲ್ಲ(ನೋಟಾ)ವನ್ನು ನೇರ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಬಹುದು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಮುಂದಿನ ರಾಜ್ಯಸಭೆ ಚುನಾವಣೆ ನಂತರ ನೋಟಾ ಅನ್ವಯವಾಗುವುದಿಲ್ಲ ಎಂದು ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ರಾಜ್ಯಸಭೆ ಚುನಾವಣೆಗೆ ಬ್ಯಾಲೆಟ್ ಪೇಪರ್ ನಲ್ಲಿ ನೋಟಾ ಆಯ್ಕೆಯನ್ನು ನೀಡುವ ಚುನಾವಣಾ ಆಯೋಗದ ಅಧಿಸೂಚನೆಯನ್ನು ತಿರಸ್ಕರಿಸಿದೆ. ಚುನಾವಣಾ ಆಯೋಗದ ಅಧಿಸೂಚನೆಯನ್ನು ಪ್ರಶ್ನಿಸಿರುವ ನ್ಯಾಯಾಲಯ ನೋಟಾ ಆಯ್ಕೆ ನೇರ ಚುನಾವಣೆಯಲ್ಲಿ ವ್ಯಕ್ತಿಗಳು ಬಳಸುವ ಆಯ್ಕೆಯಾಗಿರುತ್ತದೆ ಎಂದು ತಿಳಿಸಿದೆ.
ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ವಿರೋಧಿಸಿ ಗುಜರಾತ್ ಕಾಂಗ್ರೆಸ್ ನಾಯಕ ಶೈಲೇಶ್ ಮನುಬಾಯ್ ಪರ್ಮರ್ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ಕೂಡ ಬೆಂಬಲ ಸೂಚಿಸಿತ್ತು. ಆದರೆ ಚುನಾವಣಾ ಆಯೋಗ ಇದಕ್ಕೆ ವ್ಯತಿರಿಕ್ತವಾಗಿ ಅಧಿಸೂಚನೆ ಹೊರಡಿಸಿತ್ತು. ಒಬ್ಬ ವ್ಯಕ್ತಿಗೆ ಮತದಾನ ಮಾಡುವ ಹಕ್ಕು ಇದೆ ಎಂದಾದರೆ ಮತದಾನ ಮಾಡದಿರುವ ಹಕ್ಕು ಕೂಡ ಇರುತ್ತದೆ, ಅದು ಚುನಾವಣಾ ನಿಯಮಕ್ಕೆ ವಿರುದ್ಧವಲ್ಲ ಎಂದು ಹೇಳಿತ್ತು.
ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆಗೆ ಅವಕಾಶ ನೀಡಿದರೆ ಕುದುರೆ ವ್ಯಾಪಾರಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ ಎಂದು ಪರ್ಮರ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ನೋಟಾ ನೇರ ಚುನಾವಣೆಗಳಿಗೆ ಮಾತ್ರ ಅನ್ವಯವಾಗುತ್ತಿದ್ದು ಪರೋಕ್ಷ ಚುನಾವಣೆಗಳಲ್ಲಿ ಅದನ್ನು ಬಳಸಲು ಸಾಂಪ್ರದಾಯಿಕ ತೊಂದರೆಗಳಿರುತ್ತವೆ ಎಂದು ಎಂದು ಹೇಳಿದ್ದಾರೆ.
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಪರ್ಮರ್ ಗುಜರಾತ್ ಅಸೆಂಬ್ಲಿಯ ಕಾಂಗ್ರೆಸ್ ಮುಖ್ಯ ವಿಪ್ ಆಗಿದ್ದರು. ಗುಜರಾತ್ ನಿಂದ ಸಂಸದ ಅಹ್ಮದ್ ಪಟೇಲ್ ಸ್ಪರ್ಧಿಸಿದ್ದರು.
2013ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ತೀರ್ಪಿನ ನಂತರ ಭಾರತದಲ್ಲಿ ನೋಟಾ ಜಾರಿಗೆ ಬಂದಿತ್ತು. ಅದಾಗಿಯೂ ನೋಟಾ ತಿರಸ್ಕರಿಸುವ ಹಕ್ಕು ಅಲ್ಲ. ನೋಟಾದಡಿ ಮತಗಳು ಎಷ್ಟು ಚಲಾವಣೆಯಾದರೂ ಕೂಡ ಅಧಿಕ ಮತ ಗಳಿಸಿದ ಅಭ್ಯರ್ಥಿ ಗೆಲ್ಲುತ್ತಾನೆ.