ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್
ನವದೆಹಲಿ: ದೇಶದಲ್ಲಿರುವ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ಶೀಘ್ರದಲ್ಲಿಯೇ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಹಾಗೂ ವೈಫೈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದೇಶದಲ್ಲಿರುವ 6000 ರೈಲ್ವೇ ನಿಲ್ದಾಣಗಳಲ್ಲಿ ಶೀಘ್ರದಲ್ಲಿಯೇ ವೈಫೈ ಹಾಗೂ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಈ ಸೌಲಭ್ಯಗಳು ಕೇವಲ ಪ್ರಯಾಣಿಕರಿಗೆ ಸಹಾಯವಷ್ಟೇ ಮಾಡುವುದಿಲ್ಲ, ಕೃಷಿ ಹಾಗೂ ಬೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಜನರನ್ನು ನಾನು ನಂಬುತ್ತೇನೆ. ವೈಫೈ ಸೌಲಭ್ಯ ಪ್ರಮುಖವಾಗಿ ಹಳ್ಳಿಗಳಲ್ಲಿರುವ ಮಕ್ಕಳು, ರೈತರು, ಉದ್ಯೋಗಸ್ಥ ಮಹಿಳೆಯರಿಗೆ ಸಹಾಯಕವಾಗಲಿದೆ.
ಪ್ರಯಾಣಿಕ ವಿಮಾನಗಳಲ್ಲಿ ಅಳವಡಿಸಲಾಗಿರುವಂತೆಯೇ ರೈಲುಗಳಲ್ಲಿಯೂ ಶೀಘ್ರದಲ್ಲಿಯೇ ಜೈವಿಕ ನಿರ್ವಾತ ಶೌಚಾಲಯ (ಬಯೋ ವ್ಯಾಕ್ಯೂಮ್ ಟಾಯ್ಲೆಟ್)ಗಳ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೈಲ್ವೇ ಇಲಾಖೆ ಸಹಾಯವಾಣಿ ಸೇವೆಗಳನ್ನು ಆರಂಭಿಸುವ ವರದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಂತೆ ಚಿಂತನೆಗಳು ನಡೆಯುತ್ತಿವೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಪ್ರಸ್ತುತ ಈ ಯೋಜನೆ ಚಾಲನೆಗೆ ಬಂದಿಲ್ಲ ಎಂದಿದ್ದಾರೆ.