ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
“ರಥ ಯಾತ್ರೆಯಂಥ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಮೂಲಕ ಮಮತಾ ಬ್ಯಾನರ್ಜಿ ಹತ್ತಿಕ್ಕುತ್ತಿದ್ದಾರೆ. ಮುಖ್ಯಮಂತ್ರಿಯ ಈ ಟ್ರೆಂಡ್ ಪ್ರಜಾಪ್ರಭುತ್ವದ ನಿದರ್ಶನವಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ರಥಯಾತ್ರೆ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಅಲ್ಲಿನ ಹೈಕೋರ್ಟ್ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಖಂಡಿತವಾಗಿಯೂ ರಥಯಾತ್ರೆ ನಡೆಸಲಿದೆ, ಯಾರಿಂದಲೂ ನಮ್ಮನ್ನು ತಡೆಯುವುದಕ್ಕೆ ಸಾಧ್ಯವಿಲ್ಲ, ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ಮೂಡಿಸಲು ಬಿಜೆಪಿ ಬದ್ಧವಾಗಿದೆ, ರಥಯಾತ್ರೆಗಳನ್ನು ವಾಪಸ್ ಪಡೆದಿಲ್ಲ, ದಿನಾಂಕಮುಂದೂಡಲಾಗಿದೆಯಷ್ಟೇ ಎಂದು ಅಮಿತ್ ಶಾ ಹೇಳಿದ್ದಾರೆ. ನಾವು ಕಾನೂನಿನ ಪ್ರಕಾರವೇ ಯಾತ್ರೆಯನ್ನು ಆಯೋಜಿಸುತ್ತೇವೆ. ಯಾತ್ರೆ ರಾಜ್ಯದ ಪ್ರತಿಯೊಂದು ಭಾಗಕ್ಕೂ ಸಂಚರಿಸಲಿದೆ.
ರಥಯಾತ್ರೆ ಕೋಮು ಸಂಘರ್ಷಕ್ಕೆ ಅನುವು ಮಾಡಿಕೊಡುತ್ತದೆ ಎಂಬ ಕಾರಣದಿಂದ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರವು ಅಮಿತ್ ಶಾ ಅವರ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು.
ಮಮತಾ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕೋಲ್ಕತಾ ಹೈಕೋರ್ಟ್‌ಗೆ ಯಾತ್ರೆ ನಡೆಸಲು ಅನುಮತಿ ಕೋರಿ ಬಿಜೆಪಿ ಅರ್ಜಿ ಹಾಕಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠವು ಕೂಚ್ ಬಿಹಾರ್ ನಲ್ಲಿ ಯಾತ್ರೆಯನ್ನು ನಡೆಸುವಂತಿಲ್ಲ ಎಂದು ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಮೇಲ್ಮನವಿ ಸಲ್ಲಿಸಿದ್ದು, ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics