ಮುಂಬೈ: ಮಹಾರಾಷ್ಟ್ರದ ಪರ್ಬಾನಿ ಜಿಲ್ಲೆಯಲ್ಲಿ ಬೆಳೆ ಸಾಲಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 39 ವರ್ಷದ ರೈತರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ತಿ ತೆಹಸಿಲ್ ನ ಮರ್ದಜ್ಗಾಂವ್ ಗ್ರಾಮದ ತುಕರಾಮ್ ವೈಜನಾಥ್ ಕಾಳೆ ತ ದುರ್ದೈವಿ ಎಂದು ಗುರ್ತಿಸಲಾಗಿದೆ. ಈತ ಬೆಳೆ ಸಾಲಕ್ಕಾಗಿ ಒತ್ತಾಯಿಸಿ ಕೆಲ ರೈತರೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಎನ್ನಲಾಗಿದೆ.
ಬ್ಯಾಂಕ್ ಬೆಳೆ ಸಾಲವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕೆಂದು ಇವರ ಬೇಡಿಕೆಯಾಗಿತ್ತು ಎಂದು ಪರ್ತಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿದ್ಯಾಸಾಗರ್ ಶ್ರಿಮಾನ್ವರ್ ಹೇಳಿದ್ದಾರೆ.
ಉಪವಾಸದಿಂದಾಗಿ ಇಂದು ಮಧ್ಯಾಹ್ನ ಕಾಳೆ ಆರೋಗ್ಯ ಪರಿಸ್ಥಿತಿ ಕ್ಷೀಣಗೊಂಡಿತ್ತು. ನಂತರ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರವಾನಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಉಪವಾಸ ನಡೆಸುತ್ತಿದ್ದ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.