ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್
ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜೀವನಾಧಾರಿತ ಚಿತ್ರ 'ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಚಿತ್ರಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಡುವೆ ಬಿಜೆಪಿ ತನ್ನ ಹೇಳಿಕೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದೆ.
ಸಂಜಯ್ ಬರು ಅವರ ಕೃತಿ ಆಧರಿಸಿ ನಿರ್ಮಾಣ ಮಾಡಲಾಗಿರುವ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ ಚಿತ್ರ 2019ರ ಜ.11ರಂದು ದೇಶದಾದ್ಯಂತ ತೆರೆ ಕಾಣಲಿದೆ. ಯುಪಿಎ ಆಡಳಿತದಲ್ಲಿ 2004ರಿಂದ 2014ರವರೆಗಿನ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರ ಕುರಿತ ಕಥೆಯೇ ಚಿತ್ರದ ಕಥಾ ವಸ್ತುವಾಗಿದೆ.
ಮನಮೋಹನ್ ಸಿಂಗ್ ಅವರ ಪಾತ್ರವನ್ನು ಚಿತ್ರದಲ್ಲಿ ಬಾಲಿವುಡ್ ಹಿರಿಯ ಹಾಗೂ ಪ್ರತಿಭಾವಂತ ನಟ ಅನುಪಮ್ ಖೇರ್ ಅವರು ನಟಿಸಿದ್ದಾರೆ. ಸಿಂಗ್ ಅವರು ಸೂತ್ರದ ಗೊಂಬೆಯಾಗಿ ಪ್ರಧಾನಿ ಹುದ್ದೆ ನಿರ್ವಹಿಸಿದರೆಂಬ ಆರೋಪ ಹೊಂದಿರುವುದರಿಂದ ಚಿತ್ರ ಇದೀಗ ವಿವಾದಕ್ಕೆ ಆಸ್ಪದವಾಗಿದೆ.
ಚಿತ್ರದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಇದೀಗ ಕಾಂಗ್ರೆಸ್ ತೀವ್ರ ವಿರೋಧಗಳನ್ನು ವ್ಯಕ್ತಪಡಿಸುತ್ತಿದೆ.
ಕಾಂಗ್ರೆಸ್ ಸಂಸದ ಪಿಎಲ್. ಪುಣ್ಯ ಅವರು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಗೇಮ್ ಆಗಿದೆ. 5 ವರ್ಷಗಳು ಪೂರ್ಣಗೊಳ್ಳುತ್ತಿದೆ ಎಂಬುದನ್ನು ಅರಿತ ಬಿಜೆಪಿ, ಬೇರಾವುದೇ ತಂತ್ರಗಳು ಸಿಗದ ಕಾರಣ ಇದೀಗ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಈ ತಂತ್ರವನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು ಮಾತನಾಡಿಕ, ಇಂತಹ ನಕಲಿ ತಂತ್ರಗಳು ಮೋದಿ ಸರ್ಕಾರವನ್ನು ಪ್ರಶ್ನಿಸುವ ಕಾಂಗ್ರೆಸ್'ನ್ನು ಹಿಂಜರಿಯುವಂತೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಚಿತ್ರದ ಟ್ರೈಲರ್ ಕುರಿತಂತೆ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ರೈಲರ್ ದೃಶ್ಯವನ್ನು ಟ್ವೀಟ್ ಮಾಡಿದೆ.
ಕುಟುಂಬ ರಾಜಕಾರಣ 10 ವರ್ಷಗಳ ಭಾರತವನ್ನು ಯಾವ ರೀತಿ ಲೂಟಿ ಮಾಡಿದೆ ಎಂಬುದರ ಕಥೆ ಇಲ್ಲಿದೆ. ಮುಂದಿನ ಹಕ್ಕುದಾರ ಸಿದ್ಧರಾಗುವವರೆಗೆ ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಕುರ್ಚಿಯಲ್ಲಿ ಕುಳಿತಿದ್ದರೆ? ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್'ನ ಅಧಿಕೃತ ಟ್ರೈಲರ್ ವೀಕ್ಷಿಸಿ. ಜ11ಕ್ಕೆ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿದೆ.
ಬಿಜೆಪಿಯ ಈ ಟ್ವೀಟ್'ಗೆ ಕಾಂಗ್ರೆಸ್' ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ಚಿತ್ರಕ್ಕೆ ನಾವು ಅಭಿನಂದನೆಗಳನ್ನೂ ಹೇಳಬಾರದೆ? ಎಂದು ಪ್ರಶ್ನಿಸಿದೆ.
ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ಚಿತ್ರಕ್ಕೆ ನಾವು ಅಭನಂದನೆಗಳನ್ನೂ ಹೇಳಬಾರದೇ? ಕಾಂಗ್ರೆಸ್ ಎಂದರೆ ಸ್ವಾತಂತ್ರ್ಯ. ಈಗೇಕೆ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮಾಡುತ್ತಿದೆ ಎಂದು ಕೇಳಿದ್ದಾರೆ.