ದೇಶ

ಚಾಲನಾ ಪರವಾನಗಿಗೂ ಆಧಾರ್ ಜೋಡಣೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರದ ಮಾಹಿತಿ

Srinivasamurthy VN
ನವದೆಹಲಿ: ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯದ ಬೆನ್ನಲ್ಲೇ ಇದೀಕ ಕೇಂದ್ರ ಸರ್ಕಾರ ಚಾಲನಾ ಪರವಾನಗಿಗಳಿಗೂ ಆಧಾರ್ ಜೋಡಣೆ ಕಡ್ಡಾಯ ಮಾಡುವ ಕುರಿತು ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಸ್ವತಃ ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, ಚಾಲನಾ ಪರವಾನಿಗೆಯೊಂದಿಗೆ ಆಧಾರ್ ಜೋಡಣೆಯ ಪ್ರಕ್ರಿಯೆಯಲ್ಲಿ ತೊಡಗಿರುವುದಾಗಿ ಸುಪ್ರಿಂ ಕೋರ್ಟ್‌ಗೆ ಬುಧವಾರ ತಿಳಿಸಿದೆ. ಮುಖ್ಯವಾಗಿ 
ನಕಲಿ ಪರವಾನಗಿಗಳನ್ನು ನಾಶಪಡಿಸಲು ಹಾಗೂ ಎಲ್ಲ ರಾಜ್ಯಗಳಲ್ಲಿ ನೀಡಲಾದ ಪರವಾನಗಿಗಳನ್ನು ಜೋಡಿಸಲು ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ಮುಂದೆ  ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಆಧಾರ್ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ ಮತ್ತೊಂದು ಪೀಠಕ್ಕೆ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಕೆ ಮಾಡಿ ಮಾಹಿತಿ ನೀಡಿದ್ದು, ಅದರನ್ವಯ ‘ಸಾರಥಿ-4’ ಎಂಬ ಹೆಸರಿನ  ಸಾಫ್ಟ್‌ವೇರ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಸಿದ್ಧಪಡಿಸುತ್ತಿದೆ ಎಂದು ಹೇಳಿದೆ. "ಈ ಸಾಫ್ಟ್‌ವೇರ್ ನೈಜ ಸಮಯದ ಆಧಾರದಲ್ಲಿ ಎಲ್ಲ ರಾಜ್ಯಗಳನ್ನು ಒಳಗೊಳ್ಳಲ್ಲಿದ್ದು, ಇದರಿಂದ ದೇಶದಲ್ಲಿ ಯಾರೊಬ್ಬರೂ ನಕಲಿ ಪರವಾನಿಗೆ  ಪಡೆಯಲು ಸಾಧ್ಯವಿಲ್ಲ’’ ಎಂದು ಸುಪ್ರೀಂ ಕೋರ್ಟ್‌ ನ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಕೆ.ಎಸ್. ರಾಧಾಕೃಷ್ಣನ್ ಅವರ ನೇತೃತ್ವದ ರಸ್ತೆ ಸುರಕ್ಷತೆಗಿರುವ ಸಮಿತಿಗೆ ಕೇಂದ್ರಸರ್ಕಾರ ತಿಳಿಸಿದೆ.
SCROLL FOR NEXT