ದೇಶ

ಉಗ್ರರ ವಿರುದ್ಧ ಹೋರಾಡುತ್ತಿರುವ ಸೈನಿಕರ ಊಟೋಪಚಾರಕ್ಕೆ ಸ್ಥಳೀಯರ ನೆರವು!

Srinivasamurthy VN
ಶ್ರೀನಗರ: ಅತ್ತ ಜಮ್ಮುವಿನ ಹೊರವಲಯದಲ್ಲಿರುವ ಭಾರತೀಯ ಸೇನಾ ಶಿಬಿರದ ಮೇಲೆ ದಾಳಿ ಮಾಡಿರುವ ಪಾಕಿಸ್ತಾನಿ ಉಗ್ರರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಭಾರತೀಯ ಸೈನಿಕರಿಗೆ ಕಾಶ್ಮೀರದ  ಸ್ಥಳೀಯರು ಊಟ ಮತ್ತು ನೀರು ನೀಡುವ ಮೂಲಕ ದೇಶಪ್ರೇಮ ಮೆರೆಯುತ್ತಿದ್ದಾರೆ.
ಭಾರತೀಯ ಸೇನಾ ಶಿಬಿರದ ಮೇಲೆ ಜೈಷ್ ಇ ಮೊಹಮದ್ ಉಗ್ರರು ನಿನ್ನೆ ಮುಂಜಾನೆ ದಾಳಿ ಮಾಡಿದ್ದು, ಉಗ್ರರ ವಿರುದ್ಧ ಸೇನೆ ಆರಂಭಿಸಿರುವ ಉಗ್ರ ನಿಗ್ರಹ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಏತನ್ಮಧ್ಯೆ ಅತ್ತ  ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ನಿರತರಾಗಿರುವುದರಿಂದ ಸೇನಾ ಸಿಬ್ಬಂದಿಗೆ ರವಾನೆಯಾಗುತ್ತಿದ್ದ ಆಹಾರ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಇದನ್ನು ಮನಗಂಡಿರುವ ಸ್ಥಳೀಯರು ಸೈನಿಕರಿಗೆ ತಮ್ಮ  ತಮ್ಮ ಮನೆಯಿಂದಲೇ ಊಟ ಮತ್ತು ನೀರಿನ ಪೂರೈಕೆ ಮಾಡುತ್ತಿದ್ದಾರೆ. 
ಶಿಬಿರದ ಬಳಿ ಇರುವ ಸೈನಿಕ ಕಾಲೋನಿಯ ಬಳಿಯ ನಿವಾಸಿಗಳು ಇಂತಹ ಕಾರ್ಯ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಕೇವಲ ಸೈನಿಕರಿಗೆ ಮಾತ್ರವಲ್ಲದೇ ಈ ಉಗ್ರ ದಾಳಿಯ ವರದಿಗಾಗಿ ಆಗಮಿಸಿರುವ ಪತ್ರಕರ್ತರಿಗೂ  ಸ್ಥಳೀಯರು ಊಟೋಪಚಾರಗಳ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿನ ಸ್ಥಳೀಯರು ತಮ್ಮದೇ ವಾಹನಗಳಲ್ಲಿ ಅನ್ನ, ನೀರು ಮತ್ತು ಇತರೆ ಚಹಾ ಮತ್ತು ತಿಂಡಿತಿನಿಸುಗಳನ್ನು ತಂದು ಸೈನಿಕರಿಗೆ ನೀಡುತ್ತಿದ್ದಾರೆ. 
ಈ ಬಗ್ಗೆ ಮಾತನಾಡಿರುವ ಸ್ಥಳೀಯರೊಬ್ಬರು ಉಗ್ರಗಾಮಿಗಳ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸುವ ಸೈನಿಕರಿಗೆ ನಾವು ಮಾಡುತ್ತಿರುವುದು ಏನೇನೂ ಅಲ್ಲ. ಅವರ ಸೇವೆ ಮುಂದೆ ನಮ್ಮದು ಅಳಿಲು ಸೇವೆಯಷ್ಟೇ..  ನಮ್ಮ ದೇಶಕ್ಕೆ ನಾವು ಈ ರೀತಿಯಲ್ಲಾದರೂ ಸೇವೆ ಮಾಡುತ್ತಿದ್ದೇವೆಲ್ಲ ಎಂಬ ಭಾವತೃಪ್ತಿ ನಮಗಿದೆ. ಅಂತೆಯೇ ಕಾರ್ಯಾಚರಣೆ ವೇಳೆ ನಮ್ಮ ಸೈನಿಕರತ್ತ ಕಲ್ಲು ತೂರುವ ದಾರಿ ತಪ್ಪಿದ ಯುವಕರಿಗೆ ಈ ಮೂಲಕವಾದರೂ ಉತ್ತಮ  ಸಂದೇಶ ರವಾನೆಯಾಗಿ ಅವರು ತಮ್ಮ ದಾರಿಯನ್ನು ಬದಲಿಸಬಹುದು ಎಂದು ಈ ಕಾರ್ಯದ ನೇತೃತ್ವ ವಹಿಸಿರುವ ಸ್ಥಳೀಯ ನಿವಾಸಿ ಸಂಜೀವ್ ಮನ್ಮೋತ್ರಾ ಹೇಳಿದ್ದಾರೆ.
ಒಟ್ಟಾರೆ ಕಾರ್ಯಾಚರಣೆಯಲ್ಲಿ ತೊಡಗಿರುವ ಸೈನಿಕರಿಗೆ ಸ್ಥಳೀಯರ ನೀಡುತ್ತಿರುವ ಸಹಕಾರ ಮತ್ತು ಬೆಂಬಲ ಶ್ಲಾಘನಾರ್ಹವಾಗಿದೆ.
SCROLL FOR NEXT